ಲಡಾಖ್‌ನಲ್ಲಿ ಭಾರತೀಯ ಯೋಧರೊಂದಿಗೆ ಚೀನಿ ಸೈನಿಕರ ಮುಖಾಮುಖಿ,ಉದ್ವಿಗ್ನ ಸ್ಥಿತಿ
.jpg)
ಲೇಹ್/ಹೊಸದಿಲ್ಲಿ,ನ.3: ಲಡಾಖ್ ವಿಭಾಗದ ಹಿಮಪರ್ವತಗಳಲ್ಲಿ ನರೇಗಾ ಯೋಜನೆಯಡಿ ನೀರಾವರಿ ಕಾಲುವೆಯೊಂದು ನಿರ್ಮಾಣಗೊಳ್ಳುತ್ತಿರುವ ಪ್ರದೇಶವನ್ನು ಅತಿಕ್ರಮಿಸಿದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ)ಯ ಸಿಬ್ಬಂದಿಗಳು ಕಾಮಗಾ ರಿಗೆ ತಡೆಯೊಡ್ಡಿದ ಬಳಿಕ ಭಾರತೀಯ ಯೋಧರು ಮತ್ತು ಚೀನಿ ಸೈನಿಕರು ಪರಸ್ಪರ ಮುಖಾಮುಖಿಯಾಗಿದ್ದು,ಉದ್ವಿಗ್ನತೆ ನೆಲೆಸಿದೆ. ಕಾಮಗಾರಿ ನಡೆಯುತ್ತಿರುವ ಪ್ರದೇಶ ತಮಗೆ ಸೇರಿದ್ದು ಎಂದು ಚೀನಿ ಸೈನಿಕರು ಪ್ರತಿಪಾದಿಸಿದ್ದು, ಅದಕ್ಕೆ ಸೊಪ್ಪು ಹಾಕದ ಭಾರತೀಯ ಯೋಧರು ಅವರು ಒಂದಿಂಚೂ ಮುಂದಕ್ಕೆ ಬಾರದಂತೆ ನಿರ್ಬಂಧಿಸಿದ್ದಾರೆ.
ಲೇಹ್‌ನ ಪೂರ್ವಕ್ಕೆ 250 ಕಿ.ಮೀ.ದೂರದ ಡೆಮ್ಚಕ್‌ನಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಅಲ್ಲಿಯ ‘ಬಿಸಿನೀರಿನ ಬುಗ್ಗೆ ’ಯನ್ನು ಸಮೀಪದ ಗ್ರಾಮದೊಂದಿಗೆ ಜೋಡಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕಾಮಗಾರಿ ಸ್ಥಳಕ್ಕೆ ನುಗ್ಗಿ ಬಂದ ಸುಮಾರು 55 ಚೀನಿ ಸೈನಿಕರು ಕಾರ್ಮಿಕರಿಗೆ ಬೆದರಿಕೆಯೊಡ್ಡಿ ಕೆಲಸವನ್ನು ನಿಲ್ಲಿಸಿದ್ದರು. ಮಾಹಿತಿ ಪಡೆದ ಸೇನೆ ಮತ್ತು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಚೀನಿ ಸೈನಿಕರ ಅಧಿಕಪ್ರಸಂಗತನಕ್ಕೆ ತಡೆಯೊಡ್ಡಿದರು ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿದವು.
ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯ ಬಳಿ ಮೊಕ್ಕಾಂ ಹೂಡಿರುವ ಚೀನಿ ಸೈನಿಕರು ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೂ ಪರಸ್ಪರ ಅನುಮತಿ ಅಗತ್ಯವಾಗಿರುವುದರಿಂದ ಕಾಮಗಾರಿಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದು, ಭಾರತೀಯ ಯೋಧರು ಅದನ್ನು ತಿರಸ್ಕರಿಸಿದ್ದಾರೆ.ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದಂತೆ ಕಾಮಗಾರಿ ರಕ್ಷಣಾ ಉದ್ದೇಶದ್ದಾಗಿದ್ದರೆ ಮಾತ್ರ ಮಾಹಿತಿ ನೀಡುವುದು ಅಗತ್ಯವಾಗುತ್ತದೆ ಎನ್ನುವುದು ಭಾರತದ ವಾದವಾಗಿದೆ.
ಎರಡೂ ಕಡೆಗಳ ಸೈನಿಕರು ತಮ್ಮ ಬಳಿಯಿದ್ದ ಬ್ಯಾನರ್‌ಗಳನ್ನು ಹೊರತೆಗೆದು ನೆಲದಲ್ಲಿ ಸ್ಥಾಪಿಸಿದ್ದಾರೆ. ಪ್ರದೇಶ ಚೀೀನಾಕ್ಕೆ ಸೇರಿದ್ದೆಂದು ಪಿಎಲ್‌ಎ ಪ್ರತಿಪಾದಿಸುತ್ತಿದ್ದರೂ ಅವರು ಒಂದು ಇಂಚೂ ಮುಂದಡಿಯಿಡದಂತೆ ಸೇನೆ ಮತ್ತು ಐಟಿಬಿಪಿ ಸಿಬ್ಬಂದಿಗಳು ನಿರ್ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿದವು.







