ಸರಣಿ ಅಪಘಾತ: ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ

ಪುತ್ತೂರು, ನ.3: ಪುತ್ತೂರು ನಗರದ ಕಲ್ಲಾರೆ ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ಬೈಕ್, ಹೋಂಡಾ ಏವಿಯೇಟರ್ ಮತ್ತು ಆಟೋರಿಕ್ಷಾ ನಡುವೆ ಸರಣಿ ಅಪಘಾತ ನಡೆದು ಹೋಂಡಾ ಏವಿಯೇಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಟ್ರಕ್ಕೋಡಿ ನಿವಾಸಿ ಸಿದ್ದೀಕ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿರುವ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲಾರೆ ಗಿರಿಜಾ ಕ್ಲಿನಿಕ್ ಬಳಿಯಲ್ಲಿ ವಿರುದ್ಧದಿಕ್ಕಿನಲ್ಲಿ ರಸ್ತೆ ವಿಭಜಕದ ಕಡೆಗೆ ಬರುತ್ತಿದ್ದ ಬೈಕ್ ಮುಂಭಾಗದಿಂದ ಬರುತ್ತಿದ್ದ ಹೋಂಡಾ ಎವಿಯೇಟರ್‌ಗೆ ತಾಗಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಏವಿಯೇಟರ್ ಸವಾರ ಸಿದ್ದೀಕ್ ರಸ್ತೆಯ ಮತ್ತೊಂದು ಬದಿಯಲ್ಲಿ ದರ್ಬೆ ಕಡೆಗೆ ತೆರಳುತ್ತಿದ್ದ ರಿಕ್ಷಾದ ಮುಂಭಾಗಕ್ಕೆ ಎಸೆಯಲ್ಪಟ್ಟಿದ್ದಾರೆ. ಇದರಿಂದಾಗಿ ರಿಕ್ಷಾಕ್ಕೆ ಹಾನಿಯಾಗಿದೆ. ರಾಂಗ್ ಸೈಡಿನಲ್ಲಿ ಬಂದು ಅಪಘಾತಕ್ಕೆ ಕಾರಣವಾದ ಬೈಕ್ ಸವಾರ ಬೈಕ್ ಸಹಿತ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಘಟನೆಯ ಸಂದರ್ಭದಲ್ಲಿ ಜನ ಜಮಾಯಿಸಿದ ಪರಿಣಾಮ ತುಸು ಕಾಲ ಸಂಚಾರ ವ್ಯವಸ್ಥೆಗೆ ಅಡ್ಡಿಯಾಯಿತು. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರೆಂದು ತಿಳಿದುಬಂದಿದೆ.







