ಎನ್‌ಡಿಟಿವಿಗೆ ಒಂದು ದಿನ ಪ್ರಸಾರ ನಿಷೇಧ ಸಾಧ್ಯತೆ
ಪಠಾಣ್‌ಕೋಟ್ ದಾಳಿಯ ವೇಳೆ ಪ್ರಸಾರ ನಿಯಮ ಉಲ್ಲಂಘನೆ

ಹೊಸದಿಲ್ಲಿ, ನ.3: ಖ್ಯಾತ ಹಿಂದಿ ಸುದ್ದಿ ವಾಹಿನಿಯೊಂದು ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಸುದ್ದಿ ಪ್ರಸಾರದ ವೇಳೆ 'ವ್ಯೆಹಾತ್ಮಕವಾಗಿ ಸೂಕ್ಷ್ಮ' ವಿವರಗಳನ್ನು ಬಹಿರಂಗಪಡಿಸಿತ್ತೆಂದು ತೀರ್ಮಾನಕ್ಕೆ ಬಂದಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಆಂತರಿಕ ಸಮಿತಿಯೊಂದು ಆ ವಾಹಿನಿಯು ಒಂದು ದಿನದ ಕಾಲ ಯಾವುದೇ ಕಾರ್ಯಾಚರಣೆ ಮಾಡದಂತೆ ತಡೆಯಬೇಕೆಂದು ಶಿಫಾರಸು ಮಾಡಿದೆ. ನ.9ರಂದು ಕಾರ್ಯಾಚರಣೆ ನಡೆಸದಂತೆ ಸಚಿವಾಲಯವೀಗ ಎನ್‌ಡಿಟಿವಿಗೆ ಆದೇಶಿಸುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ. ಭಯೋತ್ಪಾದಕ ದಾಳಿಗಳ ಸುದ್ದಿ ಬಿತ್ತರದ ಕುರಿತು ವಾಹಿನಿಯೊಂದರ ವಿರುದ್ಧ ನೀಡಲಾಗುವ ಮೊದಲ ಆದೇಶ ಇದಾಗಿರಲಿದೆ.
ಪ್ರತಿಕ್ರಿಯೆಗಾಗಿ ವಾಹಿನಿಯನ್ನು ಸಂಪರ್ಕಿಸುವ ಪ್ರಯತ್ನ ಫಲಪ್ರದವಾಗಿಲ್ಲ. ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಸುದ್ದಿ ಪ್ರಸಾರದ ಕುರಿತಾದ ಪ್ರಕರಣ ಇದಾಗಿದೆ. ಪ್ರಸಾರಿಸಲಾದ 'ಅಂತಹ ಪ್ರಮುಖ ಮಾಹಿತಿಯನ್ನು ಭಯೋತ್ಪಾದಕರ ನಿಯಂತ್ರಕರು ಕೂಡಲೇ ಹೆಕ್ಕಿಕೊಳ್ಳಬಹುದಾದಿತ್ತು ಹಾಗೂ ಕೇವಲ ರಾಷ್ಟ್ರೀಯ ಭದ್ರತೆಗೆ ಮಾತ್ರವಲ್ಲದೆ ನಾಗರಿಕರ ಹಾಗೂ ರಕ್ಷಣಾ ಸಿಬ್ಬಂದಿಯ ಪ್ರಾಣಗಳಿಗೆ ಭಾರೀ ಹಾನಿ ಮಾಡುವ ಸಾಧ್ಯತೆಯಿತ್ತೆಂದು ಸಮಿತಿ ಅಭಿಪ್ರಾಯಿಸಿದೆ.
ಜನವರಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯೇ, ಎನ್‌ಡಿಟಿವಿ ಪಠಾಣ್‌ಕೋಟ್ ವಾಯು ನೆಲೆಯಲ್ಲಿದ್ದ ಶಸ್ತ್ರಾಸ್ತ್ರ ದಾಸ್ತಾನು, ಮಿಗ್, ಯುದ್ಧ ವಿಮಾನ, ರಾಕೆಟ್ ಉಡಾವಕ, ಮೋರ್ಟಾರ್, ಹೆಲಿಕಾಪ್ಟರ್, ಇಂಧನ ಟ್ಯಾಂಕ್ ಇತ್ಯಾದಿಗಳ ವಿವರವನ್ನು ಪ್ರಸಾರ ಮಾಡಿತ್ತು. ಅದನ್ನು ಉಪಯೋಗಿಸಿ ಭಯೋತ್ಪಾದಕರು ಅಥವಾ ಅವರ ನಿಯಂತ್ರಕರು ಭಾರೀ ಹಾನಿ ಉಂಟು ಮಾಡುವ ಸಾಧ್ಯತೆಯಿತ್ತೆಂದು ಮೂಲಗಳು ತಿಳಿಸಿವೆ.







