ನಾಲ್ಕು ಸ್ತರಗಳಲ್ಲಿ ಶೇ.5ರಿಂದ 28ರಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ನಿರ್ಧಾರ

ಹೊಸದಿಲ್ಲಿ,ನ.3: 5,12,18 ಮತ್ತು 28 ಶೇಕಡಾ ದರಗಳ ನಾಲ್ಕು ಸ್ತರಗಳಲ್ಲಿ ಸರಕು ಹಾಗೂ ಸೇವಾ ತೆರಿಗೆಯನ್ನು ವಿಧಿಸಲು ಇಂದಿಲ್ಲಿ ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿಯು ನಿರ್ಧರಿಸಿದೆ. ಅಗತ್ಯ ವಸ್ತುಗಳಿಗೆ ಕಡಿಮೆ ತೆರಿಗೆಯಿದ್ದರೆ, ಐಷಾರಾಮಿ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುವುದು,ಜೊತೆಗೆ ಹೆಚ್ಚುವರಿ ಸೆಸ್‌ನ ಹೊರೆಯೂ ಇರುತ್ತದೆ.
ಹಣದುಬ್ಬರವನ್ನು ನಿಯಂತ್ರಣದಲ್ಲಿರಿಸುವ ಉದ್ದೇಶದಿಂದ ಆಹಾರ ಸೇರಿದಂತೆ ಬಳಕೆದಾರ ಹಣದುಬ್ಬರ ಸೂಚಿಯಲ್ಲಿ ಅರ್ಧದಷ್ಟಿರುವ ಅಗತ್ಯ ಸಾಮಗ್ರಿಗಳಿಗೆ ಶೂನ್ಯ ತೆರಿಗೆಯನ್ನು ನಿಗದಿಗೊಳಿಸಲು ಸಭೆಯು ನಿರ್ಧರಿಸಿದೆ.
ಸಾಮಾನ್ಯಬಳಕೆಯ ಸರಕುಗಳಿಗೆ ಶೇ.5ರ ಕನಿಷ್ಠ ತೆರಿಗೆಯನ್ನು ವಿಧಿಸಲಾಗುತ್ತದೆ. ಎರಡು ದಿನಗಳ ಜಿಎಸ್‌ಟಿ ಮಂಡಳಿಯ ಮೊದಲ ದಿನದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಪ್ರಕಟಿಸಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು, ಪ್ರಸ್ತುತ ಶೇ.30-31ರ ತೆರಿಗೆ(ಅಬಕಾರಿ ಸುಂಕ ಮತ್ತು ವ್ಯಾಟ್ ಸೇರಿ)ಯಿರುವ ಸರಕುಗಳಿಗೆ ಅತ್ಯಧಿಕ ತೆರಿಗೆ ಸ್ತರ(ಶೇ.28)ವು ಅನ್ವಯವಾಗಲಿದೆ ಎಂದರು. ಜಿಎಸ್‌ಟಿ 2017 ಎಪ್ರಿಲ್ 1ರಿಂದ ಜಾರಿಗೊಳ್ಳಲಿದೆ.
ಐಷಾರಾಮಿ ಕಾರುಗಳು, ತಂಬಾಕು ಉತ್ಪನ್ನಗಳು ಮತ್ತು ಅನಿಲ ಸಂಸ್ಕರಿತ ಪಾನೀಯ ಗಳಿಗೆ ಗರಿಷ್ಠ ತೆರಿಗೆಯ ಜೊತೆಗೆ ಹೆಚ್ಚುವರಿ ಸೆಸ್‌ನ್ನೂ ಪಾವತಿಸಬೇಕಾಗುತ್ತದೆ. ಈ ಹೆಚ್ಚುವರಿ ಸೆಸ್ ಮತ್ತು ಮತ್ತು ಶುದ್ಧ ಇಂಧನ ಸೆಸ್ ಮೂಲಕ ಸಂಗ್ರಹವಾಗುವ ಹಣವು ಜಿಎಸ್‌ಟಿ ಜಾರಿಯ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳಿಗೆ ಯಾವುದೇ ಆದಾಯ ನಷ್ಟವಾದರೆ ಪರಿಹಾರವನ್ನು ನೀಡಲು ಬಳಕೆಯಾಗಲಿದೆ. ಈ ಸೆಸ್ ಐದು ವರ್ಷಗಳ ಬಳಿಕ ರದ್ದುಗೊಳ್ಳುತ್ತದೆ ಎಂದು ಜೇಟ್ಲಿ ತಿಳಿಸಿದರು.
ಅಬಕಾರಿ ಸುಂಕ,ಸೇವಾ ತೆರಿಗೆ ಮತ್ತು ವ್ಯಾಟ್‌ನಂತಹ ಹತ್ತು ಹಲವಾರು ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ನಿವಾರಿಸುವ ಜಿಎಸ್‌ಟಿ ಜಾರಿಯಿಂದಾಗಿ ರಾಜ್ಯಗಳಿಗೆ ಆದಾಯ ನಷ್ಟಕ್ಕೆ ಪರಿಹಾರವನ್ನು ವಿತರಿಸಲು ಸುಮಾರು 50,000 ಕೋ.ರೂ.ಬೇಕಾಗುತ್ತದೆ ಎಂದು ಅವರು ಹೇಳಿದರು.
ಕಳೆದ ತಿಂಗಳು ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಶೇ.6ರಿಂದ ಶೇ.28ರವರೆಗೆ ತೆರಿಗೆಯನ್ನು ನಿಗದಿಗೊಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಇಂದಿನ ಸಭೆಯು ಇದನ್ನು ಕೊಂಚ ಪರಿಷ್ಕರಿಸಿ ಒಪ್ಪಿಕೊಂಡಿದೆ. ಬಂಗಾರದ ಮೇಲೆ ಶೇ.4 ಜಿಎಸ್‌ಟಿ ವಿಧಿಸಲು ಕೇಂದ್ರವು ಉದ್ದೇಶಿಸಿದೆಯಾದರೂ ಅಂತಿಮ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ಜೇಟ್ಲಿ ತಿಳಿಸಿದರು.







