ಇ-ಮೇಲ್ ಹ್ಯಾಕ್ ಮಾಡಿ 11.95 ಲಕ್ಷ ರೂ. ಎಗರಿಸಿದ ಖದೀಮರು !

ಮಂಗಳೂರು, ಅ. 3: ಎರಡು ಕಂಪೆನಿಗಳ ಇ ಮೇಲ್‌ನ್ನು ಹ್ಯಾಕ್ ಮಾಡುವ ಮೂಲಕ ಸಂಸ್ಥೆಯೊಂದಕ್ಕೆ 11,95,216 ರೂ. ವಂಚನೆೆ ಮಾಡಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಚಾರ್ಡ್ ಮೊಂತೆರೊ ಎಂಬವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಂಟ್ ಟೆಕ್ ಪವರ್ ಟೆಕ್ನಿಕಲ್ ಸರ್ವಿಸಸ್ ಪ್ರೈ. ಲಿ. ಎಂಬ ಕಂಪೆನಿಯನ್ನು ನಡೆಸುತ್ತಿದ್ದು ಪಿರ್ಯಾದಿದಾರರ ಕಂಪೆನಿಯ ಪ್ರೊಜೆಕ್ಟ್‌ವರ್ಕ್‌ಗೆ ಬೇಕಾದ ಸೀಲಿಂಗ್ ಎಲಿಮೆಂಟ್ ಎಂಬ ಬಿಡಿ ಭಾಗಗಳನ್ನು ಅಮೇರಿಕಾದ ಶಿಕಾಗೊ ಮೂಲದ ಇಎನ್‌ಆರ್ ಮೇಷಿನಿಂಗ್ ಕಂಪೆನಿಯಿಂದ ಆಮದು ಮಾಡಿಕೊಳ್ಳುತ್ತಿದ್ದರು.
ಆ ಕಂಪೆನಿಯೊಂದಿಗೆ ಈ ಮೇಲ್ ಸಂವಹನದ ಮೂಲಕ ವ್ಯವಹರಿಸುತ್ತಿರುವ ಮೊಂತೆರೊ, ಅಕ್ಟೋಬರ್ 7ರಂದು ಹಾಗೂ ಅಕ್ಟೋಬರ್ 20ರಂದು ತನ್ನ ಕಂಪೆನಿಯಿಂದ ಎರಡು ಖರೀದಿ ಆದೇಶಗಳನ್ನು ಕೊಟ್ಟು ಷರತ್ತಿನಂತೆ ಅ.17ರಂದು 12,000 ಅಮೇರಿಕನ್ ಡಾಲರ್ ಹಾಗೂ ಅ. 20ರಂದು 5,800 ಅಮೆರಿಕನ್ ಡಾಲರ್ ಮೊತ್ತದ ಹಣವನ್ನು ಇಎನ್‌ಆರ್ ಕಂಪೆನಿಗೆ ಇ-ಮೇಲ್ ಸಂವಹನದ ಮೂಲಕ ಪಾವತಿಸಿದ್ದಾರೆ.
ಆದರೆ, ಪರಿಶೀಲಿಸಲಾಗಿ ಒಟ್ಟು ಹಣವು (ಭಾರತೀಯ ವೌಲ್ಯ 11,95,216) ಇಎನ್‌ಆರ್ ಕಂಪೆನಿಯ ಖಾತೆಗೆ ಜಮಾ ಆಗದೇ ಇದ್ದು, ಹಣವನ್ನು ಎರಡು ಕಂಪೆನಿಗಳ ಇ-ಮೇಲ್ ಹ್ಯಾಕ್ ಮಾಡುವ ಮೂಲಕ ಯಾರೋ ಅನಾಮಿಕರು ಪಡೆದುಕೊಂಡು ವಂಚನೆಗೈದಿರುವುದು ಮೊಂತೆರೊ ಪಣಂಬೂರು ಠಾಣೆಗೆ ನೀಡಿ ದೂರಿನಲ್ಲಿ ತಿಳಿಸಿದ್ದಾರೆ.
ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







