ಶಾಸಕ ಗೋಪಾಲ ಪೂಜಾರಿ ರಾಜೀನಾಮೆಗೆ ಸಿಪಿಎಂ ಒತ್ತಾಯ
ಉಡುಪಿ, ನ.3: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ಕೆ. ಗೋಪಾಲ ಪೂಜಾರಿ, ಅಕ್ರಮ- ಸಕ್ರಮ ಸಮಿತಿಯ ಅಧ್ಯಕ್ಷರಾಗಿದ್ದು, ಸಮಿತಿಯ ಸದಸ್ಯರಿಗೆ ಅಕ್ರಮವಾಗಿ ಭೂಮಿ ಹಂಚಿಕೆಯಾಗಿದೆಯೆಂದು ಕುಂದಾಪುರ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸಾಮಾನ್ಯ ರೈತರು ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಕುಮ್ಕಿ ಮತ್ತಿತರ ಜಮೀನಿನ ಕುರಿತು ಅಕ್ರಮ-ಸಕ್ರಮ ಸಮಿತಿ ವಿವೇಚನೆಯಿಂದ ಸಕ್ರಮಗೊಳಿಸುವ ಕ್ರಮ ತೆಗೆದುಕೊಳ್ಳಬೇಕಾಗಿದ್ದರೂ. ಹಲವಾರು ವರ್ಷಗಳ ನಂತರವೂ ಕ್ರಮತೆಗೆದುಕೊಂಡಿಲ್ಲ. ಆದರೆ ಅಕ್ರಮ- ಸಕ್ರಮ ಸಮಿತಿಯ ಸದಸ್ಯರೊಬ್ಬರು ತನ್ನ ಹೆಂಡತಿಯ ಹೆಸರಿಗೆ ಭೂಮಿ ಮಂಜೂರು ಮಾಡಿಸಿಕೊಂಡಿರುವುದು ಮಾತ್ರವಲ್ಲದೇ ಆ ಭೂಮಿಯಲ್ಲಿ ಕೆಂಪು ಕಲ್ಲುಕೋರೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. ಇದು ನಿಜವಾಗಿದ್ದಲ್ಲಿ ಖಂಡಿತಾ ಇದು ಶಾಸಕರ ಗಮನಕ್ಕೆ ಬಂದೇ ನಡೆದಿದೆ. ಆದ್ದರಿಂದ ಪಾರದರ್ಶಕ ತನಿಖೆ ನಡೆಸಲು ಅನುವಾಗುವಂತೆ ಶಾಸಕ ಗೋಪಾಲ ಪೂಜಾರಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿಪಿಎಂ ಆಗ್ರಹಿಸಿದೆ.
ಈ ಹಿಂದೆ ಹೆಮ್ಮಾಡಿ ಜನತಾ ಹೈಸ್ಕೂಲಿಗೆ ಸೇರಿದ ಜಾಗದ ಪರಭಾರೆಯ ವಿಚಾರದಲ್ಲಿಯೂ ಶಾಸಕರ ಮೇಲೆ ಆಪಾದನೆಗಳು ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು ಎಂದು ಸಿಪಿಎಂ ಪ್ರಕಟಣೆಯಲ್ಲಿ ತಿಳಿಸಿದೆ.





