ಬೈಕ್‌ಗಳ ಮಧ್ಯೆ ಢಿಕ್ಕಿ: ಓರ್ವ ಸವಾರ ಮೃತ್ಯು

ಮುಲ್ಕಿ, ನ.3: ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಭಗವತಿ ಹೋಟೆಲ್ ಬಳಿ ಬೈಕುಗಳೆರಡು ಢಿಕ್ಕಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಮೃತರನ್ನು ಮುಲ್ಕಿ ಸೇತುವೆ ಬಳಿ ಮೀನು ಮಾರಾಟ ಮಾಡುತ್ತಿದ್ದ ಹಳೆಯಂಗಡಿ ಇಂದಿರಾನಗರದ ನಿವಾಸಿ ಮಯ್ಯದ್ದಿ (38) ಎಂದು ಗುರುತಿಸಲಾಗಿದೆ. ಮುಲ್ಕಿಯಲ್ಲಿ ಮೀನು ವ್ಯಾಪಾರ ಮುಗಿಸಿ ಮಂಗಳೂರು ಸಮೀಪದ ತನ್ನ ಪತ್ನಿಯ ಮನೆಗೆ ತೆರಳುತ್ತಿದ್ದ ವೇಳೆ ಹೆಜಮಾಡಿಯಿಂದ ಸುರತ್ಕಲ್ ಕಡೆ ತೆರಳುತ್ತಿದ್ದ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಢಿಕ್ಕಿ ಹೊಡೆದ ಪರಿಣಾಮ ಮಯ್ಯದ್ದಿ ಬೈಕ್‌ನಿಂದ ರಸ್ತೆ ವಿಭಜಕದ ಮೇಲೆ ಬಿದ್ದಿದ್ದು, ತಲೆಗೆ ರಸ್ತೆ ವಿಭಜಕ ಹೊಡೆದು ಗಂಭೀರ ಗಾಯಗೊಂಡಿದ್ದರು.
ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟರೆಂದು ತಿಳಿದು ಬಂದಿದೆ.
ಇನ್ನೊಂದು ಬೈಕ್‌ನಲ್ಲಿದ್ದ ಹೆಜಮಾಡಿಕೋಡಿ ಕಡವಿನ ಬಾಗಿಲು ನಿವಾಸಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಈ ಸಂಬಂಧ ಸುರತ್ಕಲ್ ಮಂಗಳೂರು ಉತ್ತರವಲಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆಯಂಗಡಿ, ಮುಕ್ಕ, ಕೊಲ್ನಾಡು ಪ್ರದೇಶಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ದಿನವೊಂದಕ್ಕೆ 2ರಿಂದ 3 ಅಪಘಾತಗಳು ನಡೆಯುತ್ತಿವೆ. ಅಪಘಾತಗಳಲ್ಲಿ ದ್ವಿಚಕ್ರ ಸವಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆದ್ದಾರಿಯಲ್ಲಿ ಮೀನಿನ ನೀರು ಚೆಲ್ಲಿಕೊಂಡು ಹೋಗುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿವೆ. ರಾತ್ರಿವೇಳೆ ಕಣ್ಣು ಕುಕ್ಕುವ ರೀತಿಯಲ್ಲಿ ಅಳವಡಿಸುವ ಹೆಡ್‌ಲೈಟ್‌ಗಳಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿರುವ ಜನತೆ, ಸಂಚಾರಿ ಪೊಲೀಸರು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಚಾರದ ನಿಯಮಗಳನ್ನು ಅನುಸರಿಸದೆ ಅತಿಯಾದ ವೇಗ ಮತ್ತು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದರಿಂದ ಅಪಘಾತ ಪ್ರಕರಣಗಳಲ್ಲಿ ಸಾವು ಸಂಭವಿಸುತ್ತಿರುತ್ತದೆ. ಅದರಲ್ಲೂ ಹೆಚ್ಚಿನ ಅಪಘಾತಗಳಲ್ಲಿ ಯುವಕರೇ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಇಲಾಖೆ ಬಂದೋಬಸ್ತ್ ಕೈಗೊಳ್ಳುತ್ತಿವೆಯಾದರೂ ಸವಾರರೂ ಜಾಗ್ರತೆ ವಹಿಸಬೇಕೆಂದು ಮಂಗಳೂರು ಉತ್ತರವಲಯ ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ತಿಳಿದ್ದಾರೆ.







