ಮಾಜಿ ಯೋಧ ರಾಮ್ ಕಿಶನ್ ಆತ್ಮಹತ್ಯೆ ಪ್ರಕರಣ
ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ, ನ.3: ನಿವೃತ್ತ ಯೋಧ ಸುಬೇದಾರ್ ರಾಮ್ ಕಿಶನ್‌ಗ್ರೆವಾಲ್ ಆತ್ಮಹತ್ಯೆಗೆ ಕಾರಣವಾದ ಕೇಂದ್ರ ಸರಕಾರದ ಧೋರಣೆ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯವರ ಬಂಧನ ಖಂಡಿಸಿ ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಸೇನೆಯ ನಿವೃತ್ತ ಯೋಧರಿಗಾಗಿ ಯುಪಿಎ ಸರಕಾರ ಜಾರಿಗೆ ತಂದಿದ್ದ ಸಮಾನ ಶ್ರೇಣಿ ಸಮಾನ ವೇತನ (ಓಆರ್‌ಒಪಿ) ಯೋಜನೆಯ ಅನುಷ್ಠಾನಕ್ಕಾಗಿ ಒತ್ತಾಯಿಸುವ ಪ್ರತಿಭಟನೆಯ ಮಂಚೂಣಿಯಲ್ಲಿದ್ದ ಮಾಜಿ ಯೋಧ ಸುಬೇದಾರ್ ರಾಮ್ ಕಿಶನ್ ಗ್ರೇವಾಲ್ ದೆಹಲಿಯಲ್ಲಿ ಮಾಡಿಕೊಂಡ ಆತ್ಮಹತ್ಯೆಗೆ ಕೇಂದ್ರ ಸರಕಾರವೇ ನೇರ ಹೊಣೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮಾಜಿ ಯೋಧನ ಕುಟುಂಬ ಸದಸ್ಯರ ಭೇಟಿಗಾಗಿ ದಿಲ್ಲಿಯ ಆಸ್ಪತ್ರೆಗೆ ಆಗಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯನ್ನು ಎರಡು ಬಾರಿ ಬಂಧಿಸಿರುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸುಬೇದಾರ್ ಗ್ರೇವಾಲ್ ಕುಟುಂಬದವರ ಮೇಲೆಯೂ ದೆಹಲಿ ಪೊಲೀಸರು ದೌರ್ಜನ್ಯ ಎಸಗಿರುವುದು ಖಂಡನೀಯವಾಗಿದೆ. ಇದು ಸೈನಿಕರಿಗೆ ಮಾಡಿದ ಅಪಮಾನವಾಗಿದ್ದು, ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿದ್ದಾರೆ. ಮಾಜಿ ಯೋಧರ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಇರುವ ಕಾಳಜಿ ಏನೆಂಬುದನ್ನು ಈ ಆತ್ಮಹತ್ಯೆ ಪ್ರಕರಣ ಬಯಲು ಮಾಡಿದೆ. ಕೇಂದ್ರ ಸರಕಾರ ಯೋಧರ ಕುರಿತಾಗಿ ತಳೆದಿರುವ ನಿರ್ಲಕ್ಷಕ್ಕೆ ಇದು ಸಾಕ್ಷಿಯಾಗಿದೆ. ತಕ್ಷಣವೇ ನಿವೃತ್ತ ಸೈನಿಕರಿಗೂ ಸಮಾನ ಶ್ರೇಣಿ ಸಮಾನ ವೇತನ ಯೋಜನೆಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ರಮೇಶ್ ಹೆಗ್ಡೆ, ಎನ್.ರಮೇಶ್, ಕಾಶಿ ವಿಶ್ವನಾಥ್, ರಾಮೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







