ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಎಸ್‌ಡಿಪಿಐನಿಂದ ಧರಣಿ
ಭೋಪಾಲ್ ಎನ್‌ಕೌಂಟರ್ ಪ್ರಕರಣ

ಶಿವಮೊಗ್ಗ, ನ.3: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಇತ್ತೀಚೆಗೆ ನಡೆದ ಶಂಕಿತ ಸಿಮಿ ಸಂಘಟನೆಯ ಸದಸ್ಯರ ಎನ್‌ಕೌಂಟರ್ ಪ್ರಕರಣವು ಮೇಲ್ನೋಟಕ್ಕೆ ನಕಲಿ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಭಾರೀ ಭದ್ರತೆಯಿರುವ ಭೋಪಾಲ್ ಕಾರಾಗೃಹದಿಂದ ಎಂಟು ಜನರು ತಪ್ಪಿಸಿಕೊಂಡು ಪರಾರಿಯಾಗಿರುವುದರ ಬಗ್ಗೆಯೇ ಹಲವು ಶಂಕೆಗಳು ವ್ಯಕ್ತವಾಗುತ್ತಿವೆ. ಅಲ್ಲದೆ ಸರಿಸುಮಾರು 25ರಿಂದ 30 ಅಡಿ ಎತ್ತರದ ಗೋಡೆ ಜಿಗಿದು 20 ನಿಮಿಷಗಳಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿರುವುದು ನಂಬಲಸಾಧ್ಯವಾಗಿದೆ ಎಂದು ಧರಣಿನಿರತರು ದೂರಿದ್ದಾರೆ. ಹಾಗೆಯೇ ಎನ್‌ಕೌಂಟರ್ ನಡೆದ ನಂತರ ಮಧ್ಯಪ್ರದೇಶ ಸರಕಾರದ ಗೃಹ ಸಚಿವರು ಸಿಮಿ ಸಂಘಟಕರ ಬಳಿ ಯಾವುದೇ ಶಸ್ತ್ರಾಸ್ತ್ರಗಳು ದೊರಕಿಲ್ಲ ಎಂದು ಹೇಳಿದ್ದಾರೆ. ಅಲ್ಲಿನ ಪೊಲೀಸ್ ಇಲಾಖೆಯ ಐ.ಜಿ.ಯವರು ಶಸ್ತ್ರಾಸ್ತಗಳು ದೊರಕಿವೆ ಎಂದು ಹೇಳಿದ್ದಾರೆ ಇದು ಸಂಶಯಾಸ್ಪದವಾಗಿದೆ ಎಂದು ಧರಣಿನಿರತರು ಆರೋಪಿಸಿದ್ದಾರೆ. ಮತ್ತೊಂದೆಡೆ ಈ ಘಟನೆಯ ಬಗ್ಗೆ ಉನ್ನತ ಸ್ಥಾನದಲ್ಲಿರುವವರು ದಿನದಿಂದ ದಿನಕ್ಕೆ ವಿರೋಧಾಭಾಸದ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಇದರಿಂದ ಮೇಲ್ನೋಟಕ್ಕೆ ಈ ಎನ್‌ಕೌಂಟರ್ ಕಟ್ಟುಕಥೆಯಾಗಿರುವ ಸಾಧ್ಯತೆಯಿದ್ದು, ಇದೊಂದು ಪೂರ್ವಯೋಜಿತ ಎನ್‌ಕೌಂಟರ್ ಆಗಿದೆ. ಇದೀಗ ಮಧ್ಯಪ್ರದೇಶ ಸರಕಾರವು ಪ್ರಕರಣದ ದಿಕ್ಕು ತಪ್ಪಿಸಲು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಎಂಟು ಜನರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ. ಧರಣಿಯಲ್ಲಿ ಎಸ್‌ಡಿಪಿಐ ಪ್ರಮುಖರಾದ ಅಬ್ದುಲ್ ಮುಜೀಬ್, ಕಲೀಂ, ಅಲ್ಲಾಭಕ್ಷ್, ವಾಸೀಂ, ಮುಹಮ್ಮದ್, ಫಾರೂಕ್ ಸೇರಿದಂತೆ ಮತ್ತಿತರರರು ಉಪಸ್ಥಿತರಿದ್ದರು.





