ಪಾಲಿಕೆ ಆಯುಕ್ತೆಯ ಭ್ರಷ್ಟಾಚಾರದ ಆರೋಪ ನಿರಾಧಾರ: ಮೇಯರ್ ಮರಿಯಪ್ಪ

ಶಿವಮೊಗ್ಗ, ನ.3: ಕಳೆದ ತಿಂಗಳ ಕೊನೆಯ ವಾರದಲ್ಲಿ ಜರಗಿದ ಮಹಾನಗರ ಪಾಲಿಕೆಯ ಮಾಸಿಕ ಸಭೆೆಯಲ್ಲಿ ಆಯುಕ್ತೆ ತುಷಾರಮಣಿ ವಿರುದ್ಧ ಸದಸ್ಯ ಮೋಹನ್ ರೆಡ್ಡಿ ಮಾಡಿದ್ದ ಭ್ರಷ್ಟಾಚಾರದ ಆರೋಪ ಸತ್ಯಕ್ಕೆ ದೂರವಾದುದು ಎಂದು ಮೇಯರ್ ಎಸ್.ಕೆ.ಮರಿಯಪ್ಪ ತಿಳಿಸಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಮೇಯರ್ ಮಾತನಾಡಿ, ಸದಸ್ಯ ಮೋಹನ್ ರೆಡ್ಡಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂಬಂಧಿತ ಅಧಿಕಾರಿಗಳಿಂದ ವರದಿ ಮತ್ತು ಹೇಳಿಕೆ ಪಡೆಯಲಾಗಿದೆ. ಮೇಲ್ನೋಟಕ್ಕೆ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಕಂಡುಬಂದಿದೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿ ಸಿದಂತೆ ಹೆಚ್ಚಿನ ಚರ್ಚೆಯ ಆವಶ್ಯಕತೆಯಿಲ್ಲ ಎಂದು ರೂಲಿಂಗ್ ನೀಡಿದರು.
ಈ ಹಂತದಲ್ಲಿ ಸದಸ್ಯ ಮೋಹನ್‌ರೆಡ್ಡಿ ಮಾತನಾಡಲು ಯತ್ನಿಸಿದರಾದರೂ, ಮೇಯರ್‌ಮಾತನಾಡಲು ಅವಕಾಶ ನೀಡಲಿಲ್ಲ. ರೂಲಿಂಗ್ ನೀಡಿದ ನಂತರ ಈ ವಿಚಾರಕ್ಕೆ ಪೂರ್ಣ ವಿರಾಮ ಹಾಕಿದಂತಾಗಿದೆ ಎಂದು ಹೇಳಿ ಮುಂದಿನ ವಿಷಯ ಪ್ರಸ್ತಾಪಕ್ಕೆ ಅನುವು ಮಾಡಿಕೊಟ್ಟರು.
ಬೀದಿ ದೀಪ ದುರಸ್ತಿ:
ನಗರ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಅಸಮರ್ಪಕ ನಿರ್ವಹಣೆಯ ಬಗ್ಗೆ ಅಧಿಕಾರಿಗಳ ವಿರುದ್ಧ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ನಾಗರಾಜ್ ಕಂಕಾರಿ ವಿಷಯ ಪ್ರಸ್ತಾಪಿಸಿ ಮಾತನಾಡಿ, ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಟ್ಯೂಬ್‌ಲೈಟ್, ಎಲ್‌ಇಡಿ, ಮೊದಲಾದ ಬಗೆಯ ದೀಪಗಳನ್ನು ಪ್ರತ್ಯೇಕವಾಗಿ ಟೆಂಡರ್ ನೀಡಿರುವುದರಿಂದ ದುರಸ್ತಿಗೆ ಯಾರೂ ಬರುತ್ತಿಲ್ಲ ಎಂದು ಹೇಳಿದರು. ಇಲೆಕ್ಟ್ರಿಕಲ್ ವಿಭಾಗದವರು ಎಷ್ಟು ದೂರು ನೀಡಿದರೂ ಗಮನ ಹರಿಸುತ್ತಿಲ್ಲ. ಪ್ರಮುಖ ಬೀದಿಗಳಲ್ಲೂ ಬೀದಿ ದೀಪ ಉರಿಯುತ್ತಿಲ್ಲ. ಇದರಿಂದ ಜನರು ಸಿಟ್ಟಿಗೆದ್ದಿದ್ದು, ಪಾಲಿಕೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿ ಸದಸ್ಯರಾದ ಬೊಮ್ಮನಕಟ್ಟೆ ಮಂಜುನಾಥ್, ಮಹೇಶ್ ಮೊದಲಾದವರು ಮಾತನಾಡಿ, ತಮ್ಮ ವಾರ್ಡ್‌ನಗಳಲ್ಲಿಯೂ ಬೀದಿ ದೀಪ ವ್ಯವಸ್ಥೆ ಹದಗೆಟ್ಟಿರುವುದನ್ನು ವಿವರಿಸಿದರು.
ಈ ಸಂದಭರ್ದಲ್ಲಿ ಮಾತನಾಡಿದ ಮೇಯರ್ ಎಸ್.ಕೆ. ಮರಿಯಪ್ಪ, ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸುವ ಸಂಬಂಧ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಕೆಲವೇ ದಿನಗಳಲ್ಲಿ ವ್ಯವಸ್ಥೆ ಸರಿದಾರಿಗೆ ಬರಲಿದೆ. ಸದ್ಯದ ಪರಿಸ್ಥಿತಿಯ ಅರಿವಿದ್ದು, ಇಲೆಕ್ಟ್ರಿಕಲ್ ವಿಭಾಗ ದವರನ್ನು ಚುರುಕುಗೊಳಿಸಲಾಗುವುದು ಎಂದರು.







