ಟಿಪ್ಪು ಕೊಡವರ ಮೇಲೆ ಯುದ್ಧ ನಡೆಸಿಲ್ಲ: ಎ.ಕೆ.ಸುಬ್ಬಯ್ಯ

ಮಡಿಕೇರಿ, ನ.3: ಟಿಪ್ಪುಸುಲ್ತಾನ್ ಬ್ರಿಟಿಷರ ಪರವಾಗಿದ್ದ ಧಂಗೆಕೋರರ ವಿರುದ್ಧ ಸಂಘರ್ಷ ನಡೆಸಿದ್ದಾನೆಯೇ ಹೊರತು ಕೊಡವರನ್ನು ಗುರುತಿಸಿ ಯಾವುದೇ ಯುದ್ಧ ನಡೆಸಲಿಲ್ಲವೆಂದು ಅಭಿಪ್ರಾಯಪಟ್ಟಿರುವ ವಿಧಾನ ಪರಿಷತ್‌ನ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ, ಶಾಂತಿಯುತ ಮತ್ತು ಸುವ್ಯವಸ್ಥಿತವಾಗಿ ಟಿಪ್ಪುಜಯಂತಿ ಆಚರಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆಗೆ ದೇವಾಲಯವನ್ನು ಕಟ್ಟುವ ಸಿದ್ಧಾಂತವನ್ನು ಹೊಂದಿರುವವರು ಮತ್ತು ಡಾ. ಅಂಬೆೇಡ್ಕರ್ ಅವರನ್ನು ವಿರೋಧಿಸುವವರು ಟಿಪ್ಪುಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು. ಟಿಪ್ಪು ಜಯಂತಿಯನ್ನು ವಿರೋಧಿಸುವ ಮೂಲಕ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಲಾಗುತ್ತಿದೆ. ಕಳೆದ ವರ್ಷ ಟಿಪ್ಪುಜಯಂತಿ ಸಂದರ್ಭ ಬಿದ್ದು ಮೃತಪಟ್ಟ ಕುಟ್ಟಪ್ಪ ಸಾವಿಗೆ ಸಂಘ ಪರಿವಾರವೇ ಕಾರಣವೆಂದ ಎ.ಕೆ. ಸುಬ್ಬಯ್ಯ, ಶಾಹುಲ್ ಹಮೀದ್ ಹತ್ಯೆಗೆ ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಚೋದನಕಾರಿ ಹೇಳಿಕೆ ಕಾರಣವೆಂದು ಆರೋಪಿಸಿದರು.
ಅಂದು ಹಿಟ್ಲರ್‌ನಂತೆ ವರ್ತಿಸಿದ ಬೋಪಯ್ಯ, ಆರೋಪಿ ಸ್ಥಾನದಲ್ಲಿ ಇರಬೇಕಾಗಿತ್ತು. ಆದರೆ, ಪೊಲೀಸರು ಬಿಜೆಪಿ ಪರವಾಗಿದ್ದರು ಮತ್ತು ಕಾಂಗ್ರೆಸ್ಸಿಗರು ರಣಹೇಡಿಗಳಾಗಿದ್ದರು ಎಂದು ಟೀಕಿಸಿದರು. ಸಂಘ ಪರಿವಾರದ ದೌರ್ಜನ್ಯದ ಫಲವಾಗಿ ಕಳೆದ ವರ್ಷ ಎರಡು ಸಾವಾಗಿದೆ. ಈ ಬಾರಿ ಕೂಡ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಟಿಪ್ಪು ಜಯಂತಿ ಆಚರಿಸಿದರೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಹೇಳಿದ್ದಾರೆ. ಸಮಾಜಕ್ಕೆ ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುವ ಗುಣ ಬಿಜೆಪಿ ಹಾಗೂ ಸಂಘ ಪರಿವಾರದ್ದಾಗಿದ್ದು, ಇದನ್ನು ಜಾತ್ಯತೀತ ಒಕ್ಕೂಟ ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ದೇಶ ದ್ರೋಹಿ ಶಕ್ತಿಗಳು ಟಿಪ್ಪುಜಯಂತಿಯನ್ನು ವಿರೋಧಿಸುವ ನೆಪದಲ್ಲಿ ಕೋಮು ಗಲಭೆಯನ್ನು ಸೃಷ್ಟಿಸಿ ಶಾಂತಿಕದಡಲು ಯತ್ನಿಸುತ್ತಿವೆ. ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವವರು ಶಾಂತಿಯುತವಾಗಿ ಹೋರಾಟ ನಡೆಸಬೇಕೇ ಹೊರತು ದೌರ್ಜನ್ಯ ನಡೆಸಬಾರದೆಂದರು. ಜಾತ್ಯತೀತ ಶಕ್ತಿಗಳು ಟಿಪ್ಪುಜಯಂತಿಯನ್ನು ಶಾಂತಿಯುತವಾಗಿ ನಡೆಸಬೇಕೆಂದು ಕರೆ ನೀಡಿದ ಅವರು, ಜನ ಜಾಗೃತಿಗಾಗಿ ನ.8 ರಂದು ರಾಜ್ಯದ ಎಲ್ಲ್ಲ ಜಿಲ್ಲಾ ಕೇಂದ್ರದಲ್ಲಿ ಜಾತ್ಯತೀತ ಸಂಘಟನೆಗಳ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯೆಂದು ಸುಬ್ಬಯ್ಯ ಹೇಳಿದರು.
ಟಿಪ್ಪುಒಬ್ಬ ಜೀವ ಪ್ರೇಮಿಯಾಗಿದ್ದು, ಜಾತ್ಯತೀತವಾದ ಮತ್ತು ಉದಾರಿಯಾಗಿದ್ದ. ದೀನ ದಲಿತರ ಪರವಾಗಿದ್ದ ಎಂದು ಅಭಿಪ್ರಾಯಪಟ್ಟ ಸುಬ್ಬಯ್ಯ, ದೌರ್ಜನ್ಯ ನಡೆಸುವವರ ಸಂಚನ್ನು ಸರಕಾರ ವಿಫಲಗೊಳಿಸಬೇಕೆಂದು ಒತ್ತಾಯಿಸಿದರು. ಟಿಪ್ಪುವಿನ ಬಗ್ಗೆ ಬಾಲಿಶ ಹೇಳಿಕೆಗಳನ್ನು ನೀಡುವ ಮೂಲಕ ಕೊಡವರ ಗೌರವವನ್ನು ಹರಾಜು ಹಾಕಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಯ ಪ್ರಮುಖ ನಿರ್ವಾಣಪ್ಪ ಹಾಗೂ ವಕೀಲ ಕೆ.ಆರ್. ವಿದ್ಯಾಧರ್ ಉಪಸ್ಥಿತರಿದ್ದರು.







