ಅಕ್ರಮ ಬೀಟೆ ಮರದ ನಾಟಾ ಪತ್ತೆ: ಆರೋಪಿಗಳು ವಶಕ್ಕೆ

ಕುಶಾಲನಗರ, ನ.3: ನಂಜರಾಯಪಟ್ಟಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಬೀಟೆ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅರಣ್ಯಾಧಿಕಾರಿಗಳು ದಾಳಿ ನಡೆಸುವ ಮೂಲಕ ವಶಪಡಿಸಿಕೊಂಡಿದ್ದಾರೆ.
ಮನೋಜ್(39), ಸೃಜನ್(26), ನಾಪೊಕ್ಲಿನ ಪ್ರಸಾದ್(29) ಅಕ್ರಮ ಸಾಗಾಟ ಮಾಡುತ್ತಿದ್ದ ಆರೋಪಿಗಳಾಗಿದ್ದಾರೆ. 2.5ಲಕ್ಷ ರೂ. ಬೆಲೆ ಬಾಳುವ ಅಂದಾಜು 15 ಬೀಟೆ ಮರದ ತುಂಡುಗಳನ್ನು ಕೆ.ಎಲ್.10-ಎ.ಎಫ್.9836 ಸಂಖ್ಯೆಯ ಲಾರಿಯಲ್ಲಿ ಅಕ್ರಮವಾಗಿ ಮೈಸೂರಿಗೆ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಕಲೆ ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿ, ಲಾರಿಯನ್ನು ತಡೆದು ಪರಿಶೀಲಿಸಿದಾಗ ಬೀಟೆ ಮರದ ತುಂಡುಗಳು ಇರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಕುಶಾಲನಗರ ವಲಯ ಅರಣ್ಯಾಧಿಕಾರಿ ನೇಹರ್, ಇಲಾಖೆ ಸಿಬ್ಬಂದಿಯೊಡನೆ ದಾಳಿ ನಡೆಸಿದ್ದಾರೆ. 10 ಲಕ್ಷ ರೂ. ಬೆಲೆ ಬಾಳುವ ಲಾರಿಯನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಪ್ರಸಾದ್, ಸಿಬ್ಬಂದಿ ರಂಜನ್. ಶಿವರಾಮ್, ಯತೀಸ್ ಮಂಜೇಗೌಡ, ಚಾಲಕ ನಾರಾಯಣ ಪಾಲ್ಗೊಂಡಿದ್ದರು.





