ಶರಾವತಿ ನದಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲು ಒತ್ತಾಯ

ಕಾರವಾರ, ನ.3: ಹೊನ್ನಾವರ ತಾಲೂಕಿನ ಶರಾವತಿ ನದಿಯಲ್ಲಿ ಪುನಃ ಮರಳು ತೆಗೆಯಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಮರಳು ದೋಣಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಒಂದು ವೇಳೆ ಶೀಘ್ರವೇ ಅವಕಾಶ ನೀಡದ ಪಕ್ಷದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆ.5ರಿಂದ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಬರುವ ಎಲ್ಲ ನದಿ ಪಾತ್ರಗಳಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ನಿರ್ಣಯದಂತೆ ಪುನಃ ಮರಳು ಚಟುವಟಿಕೆ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಹೊನ್ನಾವರ ತಾಲೂಕಿನ ಶರಾವತಿ ನದಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಮರಳು ತೆಗೆಯಲು ಹಿನ್ನಡೆಯಾಗಿತ್ತು. ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಗೊಂಡು ಸೂಚನೆಯಂತೆ ಎನ್‌ಐಟಿ ಸೂರತ್ಕಲ್ ಅವರ ಮೂಲಕ ನದಿಯಲ್ಲಿರುವ ಮರಳು ಪಟ್ಟಿಯ ಪರಿವೀಕ್ಷಣೆ ಕೈಗೊಳ್ಳಲಾಗಿದೆ. ನಂತರ ಅ.3ರಂದು ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆಗೊಂಡು ಇನ್ನೂ ಮೂರು ವಾರಗಳಲ್ಲಿ ಅವಲೋಕಿಸಿ ಪುನಃ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಸರಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಆದರೆ ಈವರೆಗೆ ಮರಳುಗಾರಿಕೆಗೆ ಅವಕಾಶ ನೀಡಿಲ್ಲ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಹೊನ್ನಾವರ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಅಕ್ರಮದ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದ್ದಾರೆ.
ಸಾಂಪ್ರದಾಯಿಕ ಮರಳು ಗಣಿಗಾರಿಕೆ ನಂಬಿ ಭಟ್ಕಳ ಹಾಗೂ ಹೊನ್ನಾವರದಲ್ಲಿ ಜೀವನ ನಡೆಸುತ್ತಿದ್ದ ಹಲವಾರು ಕುಟುಂಬಗಳು ಇಂದು ಸಂಕಷ್ಟಕ್ಕೆ ಸಿಲುಕಿವೆ. ಕೂಲಿ ಕಾರ್ಮಿಕರು, ವಾಹನ ಚಾಲಕರು, ಮರಳು ಸಾಗಾಟ ವಾಹನಗಳಿಗೆ ಕೆಲಸವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ಕೋರಿಕೊಂಡಿದ್ದಾರೆ.
ಈ ಸಂದರ್ಭ ಗೋವಿಂದ ನಾಯ್ಕ, ರಮಾಕಾಂತ ಮೇಸ್ತಾ, ವಾಮನ್ ಅಂಬಿಗ, ಯೋಗೀಶ ಮೇಸ್ತಾ ಹಾಗೂ ಇನ್ನಿತರರು ಇದ್ದರು.







