ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯ 1.78ಲಕ್ಷ ರೂ. ಬಾಡಿಗೆ ಬಾಕಿ
ಶಿವಮೊಗ್ಗ, ನ. 3: ಪ್ರತಿನಿತ್ಯ ಸ್ಥಿರಾಸ್ತಿ ಮತ್ತಿತರ ನೋಂದಣಿಯ ಮೂಲಕ ಸರಕಾರಕ್ಕೆ ಲಕ್ಷಾಂತರ ರೂ. ಆದಾಯ ಸಂಗ್ರಹಿಸಿ ಕೊಡುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ತನ್ನ ಕಚೇರಿ ಕಟ್ಟಡಕ್ಕೆ ಸಂಬಂಧಿಸಿದಂತೆ, ಸುಮಾರು ಒಂದು ವರ್ಷದಿಂದ ಲಕ್ಷಾಂತರ ರೂ. ಬಾಡಿಗೆ ಬಾಕಿ ಉಳಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ನಗರದ ವಿನೋಬಾನಗರ ಬಡಾವಣೆಯ ಪೊಲೀಸ್ ಚೌಕಿ ಸಮೀಪದ 100 ಅಡಿ ರಸ್ತೆಗೆ ಹೊಂದಿಕೊಂಡಂತಿರುವ ಶಿವಮೊಗ್ಗ - ಭದ್ರಾವತಿ ಮಹಾನಗರ ಪಾಲಿಕೆ (ಸೂಡಾ) ಅಧೀನದ ಕಟ್ಟಡದಲ್ಲಿ, ಮಾಸಿಕ ಬಾಡಿಗೆ ಆಧಾರದ ಮೇಲೆ ಸಬ್ ರಿಜಿಸ್ಟ್ರಾರ್ ಕಚೇರಿ ಕಟ್ಟಡ ಕಾರ್ಯನಿರ್ವಹಣೆ ಮಾಡುತ್ತಿದೆ. ಆದರೆ, ಕಚೇರಿಯಿಂದ ಸೂಡಾ ಆಡಳಿತಕ್ಕೆ ಸಮರ್ಪಕ ಮಾಸಿಕ ಬಾಡಿಗೆ ಪಾವತಿಯಾಗುತ್ತಿಲ್ಲ. ಈ ಬಗ್ಗೆ ಸೂಡಾ ಆಡಳಿತವು ಸಬ್ ರಿಜಿಸ್ಟ್ರಾರ್ ಕಚೇರಿಗೆ ಪ್ರತಿ
ತಿಂಗಳು ನೋಟಿಸ್ ನೀಡುತ್ತಿದ್ದರೂ ಬಾಕಿ ಪಾವತಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ, ವಕೀಲ ವಿನೋದ್ ದೂರಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಬಾಡಿಗೆ ದರ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದ್ದರೂ, ಸಬ್ ರಿಜಿಸ್ಟ್ರಾರ್ ಕಚೇರಿ ಕಟ್ಟಡದ ಬಾಡಿಗೆ ದರವು ಕಳೆದ ಸುಮಾರು 15 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ. ವಿಶಾಲವಾದ ಕಟ್ಟಡದಿಂದ ಲಭ್ಯವಾಗುತ್ತಿರುವ ಬಾಡಿಗೆ ಮೊತ್ತ ಅತ್ಯಲ್ಪವಾಗಿದೆ. ಈ ಕುರಿತಂತೆ ತಾವು ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದಿರುವ ಮಾಹಿತಿಯಲ್ಲಿ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಬಾಕಿಯ ವಿವರ: ಸೂಡಾ ಒಡೆತನದ ಕಟ್ಟಡದಲ್ಲಿ ಸುಮಾರು 216 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಸಬ್ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಣೆ ಮಾಡುತ್ತಿದೆ. ಮಾಸಿಕ 15, 475 ರೂ. ಬಾಡಿಗೆ ನಿಗದಿ ಮಾಡಲಾಗಿದ್ದು, ಬಾಡಿಗೆ ಮೊತ್ತ ನಿಯಮಿತವಾಗಿ ಪಾವತಿಯಾಗುತ್ತಿಲ್ಲ. ಇಲ್ಲಿಯವರೆಗೆ ಸೂಡಾಕ್ಕೆ 1.78 ಲಕ್ಷ ರೂ. ಬಾಕಿ ಸಂದಾಯವಾಗಬೇಕಾಗಿದೆ ಎಂದು ಆರ್‌ಟಿಐ ಮೂಲಕ ಮಾಹಿತಿ ಬಹಿರಂಗ ಪಡಿಸಿದ ವಕೀಲ ವಿನೋದ್ ಮಾಹಿತಿ ನೀಡಿದ್ದಾರೆ. ಆಯಕಟ್ಟಿನ ಪ್ರದೇಶ ಹಾಗೂ ವಿಶಾಲವಾದ ಜಾಗದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕಟ್ಟಡವಿದೆ. ಪ್ರಸ್ತುತ ಈ ಕಟ್ಟಡವನ್ನು ಖಾಸಗಿಯವರಿಗೆ ನೀಡಿದರೆ ಮಾಸಿಕ 50 ಸಾವಿರಕ್ಕೂ ಅಧಿಕ ಬಾಡಿಗೆ ಬರಲಿದೆ. ಆದರೆ, ಈ ಕಟ್ಟಡದಿಂದ ಸೂಡಾಕ್ಕೆ ಬರುತ್ತಿರುವ ಬಾಡಿಗೆ ಮೊತ್ತ ಕೇವಲ 15,475 ರೂ. ಮಾತ್ರವಾಗಿದೆ. ಇದರಿಂದ ಸೂಡಾ ಆಡಳಿತಕ್ಕೆ ಭಾರೀ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಸೂಡಾದವತಿಯಿಂದ 60 ಮಳಿಗೆಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ನೀಡಲಾಗಿದೆ. ಈ ಮಳಿಗೆಗಳ ಬಾಡಿಗೆ ಮೊತ್ತ ಕೂಡ ಪರಿಷ್ಕರಣೆಯಾಗಿಲ್ಲ. ಮತ್ತೊಂದೆಡೆ ಮೂಲ ಮಾಲಕರು ಮಳಿಗೆಗಳನ್ನು ಕಾನೂನುಬಾಹಿರವಾಗಿ ಬೇರೆಯವರಿಗೆ ಒಳ ಬಾಡಿಗೆ ನೀಡಿದ್ದಾರೆ. ಈ ಬಗ್ಗೆ ಸೂಡಾ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿರುವ ಅವರು, ಲಕ್ಷಾಂತರ ರೂ. ಬಾಡಿಗೆ ಬಾಕಿ ಉಳಿಸಿಕೊಂಡಿರುವ ಸಬ್ ರಿಜಿಸ್ಟ್ರಾರ್ ಕಚೇರಿಯ ವಿರುದ್ಧ ಕಾನೂನು ರೀತಿಯ ಶಿಸ್ತು ಕ್ರಮ ಜರಗಿಸುವುದರ ಜೊತೆಗೆ ಕಾಲಮಿತಿಯಲ್ಲಿ ಬಾಕಿ ವಸೂಲಿಗೆ ಕ್ರಮಕೈಗೊಳ್ಳಬೇಕು. ಹಾಗೆಯೇ ಮಾಸಿಕ ಬಾಡಿಗೆ ದರ ಪರಿಷ್ಕರಣೆ ಮಾಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಕಾನೂನು ಹೋರಾಟ ಅನಿವಾರ್ಯ: ವಿನೋದ್
ಸೂಡಾ ಕಟ್ಟಡದಲ್ಲಿ ಮಾಸಿಕ ಬಾಡಿಗೆ ಆಧಾರದ ಮೇಲೆ ನೀಡಲಾಗಿರುವ ಮಳಿಗೆಗಳ ಬಾಡಿಗೆ ಪರಿಷ್ಕರಣೆಯಾಗಬೇಕು. ಒಳ ಬಾಡಿಗೆ ನೀಡಿರುವವರ ವಿರುದ್ಧ ಕ್ರಮ ಜರಗಿಸಬೇಕು. ಅಲ್ಲದೆ, ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಬರಬೇಕಾದ ಭಾರೀ ಬಾಕಿ ಮೊತ್ತವನ್ನು ವಸೂಲಿ ಮಾಡುವ ಜೊತೆಗೆ ಹಾಲಿ ಕಟ್ಟಡಕ್ಕೆ ಕಾನೂನು ರೀತಿಯ ಬಾಡಿಗೆ ನಿಗದಿ ಮಾಡಿ ವಸೂಲಿ ಮಾಡಬೇಕು. ಇಲ್ಲದಿದ್ದರೆ ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ವಕೀಲ ವಿನೋದ್‌ರವರು ತಿಳಿಸಿದ್ದಾರೆ.
ಬಾಕಿ ಮೊತ್ತ ವಸೂಲಿಗೆ ಕ್ರಮ:
ಆಯುಕ್ತ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಜಿಲ್ಲಾಡಳಿತಕ್ಕೆ ಸಂದಾಯವಾಗಬೇಕಾಗಿರುವ ಬಾಕಿ ಮೊತ್ತ ವಸೂಲಿಗೆ ಕ್ರಮಕೈಗೊಳ್ಳಲಾಗಿದ್ದು, ನೋಟಿಸ್ ಜಾರಿಗೊಳಿಸಲಾಗಿದೆ. ನಿಯಮಿತವಾಗಿ ಮಾಸಿಕ ಬಾಡಿಗೆ ಪಾವತಿಸುವಂತೆಯೂ ಸೂಚಿಸಲಾಗಿದೆ. ಇಷ್ಟರಲ್ಲಿಯೇ ಬಾಕಿ ಮೊತ್ತ ಪಾವತಿ ಮಾಡುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ದ ಆಯುಕ್ತ ಮೂಕಪ್ಪಎಂ. ಕರಭೀಮಣ್ಣವರ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.







