ಪತಿಯಿಂದ ಪತ್ನಿಯ ಕೊಲೆ: ಪ್ರಕರಣ ದಾಖಲು

ಸಿದ್ದಾಪುರ, ನ.3: ಕುಡಿದ ಅಮಲಿನಲ್ಲಿ ಪತಿ ಪತ್ನಿಯರ ಮಧ್ಯೆ ಉಂಟಾದ ಜಗಳವು ಪತ್ನಿಯ ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಹೊಸೂರು ಬೆಟ್ಟಗೇರಿಯ ಖಾಸಗಿ ತೋಟವೊಂದರಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಅಮ್ಮತ್ತಿ ಸಮೀಪದ ಹೊಸೂರು ಬೆಟ್ಟಗೇರಿಯ ಕಾಫಿ ಬೆಳೆಗಾರರೋರ್ವರ ತೋಟದಲ್ಲಿ ಕೆಲಸಮಾಡಿಕೊಂಡಿದ್ದ ಕಾರ್ಮಿಕ ಚಿಣ್ಣಪ್ಪ ಎಂಬಾತ ತನ್ನ ಪತ್ನಿ ಸೋನಿ (32) ಎಂಬಾಕೆಯನ್ನು ಕತ್ತುಹಿಸುಕಿ ಕೊಲೆಗೈದಿದ್ದಾನೆ. ಚಿಣ್ಣಪ್ಪ ಮತ್ತು ಸೋನಿ ತೋಟದ ಮನೆಯಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ವೇಳೆ ಕುಡಿದ ಅಮಲಿನಲ್ಲಿ ಚಿಣ್ಣಪ್ಪತನ್ನ ಪತ್ನಿ ಸೋನಿಯ ಮೇಲೆ ಹಲ್ಲೆ ನಡೆಸಿದ್ದ. ಈ ಸಂದರ್ಭ ಜಗಳ ತಾರಕಕ್ಕೇರಿದ್ದು, ಆರೋಪಿ ಸೋನಿಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಬಳಿಕ ತನ್ನ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿರುವುದಾಗಿ ಸ್ಥಳೀಯರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಆದರೆ ಮೃತದೇಹ ಹಾಗೂ ಮನೆಯ ಒಳಭಾಗದಲ್ಲಿದ್ದ ರಕ್ತದ ಕಲೆಯನ್ನು ಕಂಡು ಸಂಶಯ ವ್ಯಕ್ತಪಡಿಸಿದ ಸ್ಥಳೀಯರು ಕೂಡಲೇ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಮಡಿಕೇರಿ ವೃತ್ತನಿರೀಕ್ಷಕ ಮೇದಪ್ಪ, ಸಿದ್ದಾಪುರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿದ ಸಂದರ್ಭ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಚಿಣ್ಣಪ್ಪನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಮೃತ ಮಹಿಳೆ ಸೋನಿಗೆ ಈ ಹಿಂದೆ ಮತ್ತೊಂದು ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದರು. ಮೊದಲ ಪತಿಯಿಂದ ದೂರವಾದ ಬಳಿಕ ಚಿಣ್ಣಪ್ಪನನ್ನು ವಿವಾಹವಾಗಿದ್ದಳು. ಆರೋಪಿ ಚಿಣ್ಣಪ್ಪನಿಗೂ ಈ ಹಿಂದೆ ಮದುವೆಯಾಗಿದ್ದು, ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ದಂಪತಿಯ ಮಧ್ಯೆ ದಿನನಿತ್ಯ ಕುಡಿದ ಮತ್ತಿನಲ್ಲಿ ಜಗಳ ನಡೆಯುತ್ತಿತ್ತು ಸ್ಥಳಿಯರು ಆರೋಪಿಸಿದ್ದಾರೆ.





