ಪ್ರಧಾನಿ ಹುತಾತ್ಮರ ಕುಟುಂಬಗಳನ್ನು ಭೇಟಿಯಾಗಬೇಕು: ಮುಲಾಯಂ
ಲಕ್ನೋ,ನ.3: ಹುತಾತ್ಮರ ಕುಟುಂಬಗಳನ್ನು ಭೇಟಿ ಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಸಲಹೆ ನೀಡಿದ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧವನ್ನು ತಾನು ಸಮರ್ಥಿಸುವುದಿಲ್ಲ, ಆದರೆ ದೇಶದ ಗಡಿಗಳ ರಕ್ಷಣೆಯಲ್ಲಿ ಯೋಧರ ಬಲಿದಾನವನ್ನು ತಪ್ಪಿಸಲು ಮಧ್ಯಮ ಮಾರ್ಗವೊಂದು ಅಗತ್ಯವಿದೆ ಎಂದು ಹೇಳಿದರು. ಇಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ರಥಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ರಕ್ಷಣಾ ಸಚಿವನಾಗಿದ್ದಾಗ ಹುತಾತ್ಮ ಯೋಧರ ಕುಟುಂಬಗಳನ್ನು ಭೇಟಿಯಾಗುತ್ತಿದ್ದೆ. ಪ್ರಧಾನ ಮಂತ್ರಿಯವರು ಹುತಾತ್ಮರ ಕುಟುಂಬಗಳನ್ನು ಭೇಟಿಯಾಗಬೇಕೆಂದು ತಾನು ಬಯಸುತ್ತೇನೆ. ಆ ಕುಟುಂಬಗಳನ್ನು ತಾನು ವಂದಿಸುತ್ತೇನೆ. ಅವರು ದುಃಖದಲ್ಲಿರಬಹುದು, ಆದರೆ ತಮ್ಮ ಮಕ್ಕಳು ದೇಶದ ಗಡಿಗಳ ರಕ್ಷಣೆಯಲ್ಲಿ ವೀರಮರಣವನ್ನು ಅಪ್ಪಿದ್ದಕ್ಕೆ ಅವರು ಹೆಮ್ಮೆ ಪಡಬೇಕು ಎಂದರು.
Next Story





