ಒಆರ್‌ಒಪಿ ವಿವಾದ: ಕಾಂಗ್ರೆಸ್ ಪ್ರತಿಭಟನೆ
ಮಾಜಿ ಸಚಿವ ಬನ್ಸಲ್ ಸೇರಿ ಹಲವರ ಬಂಧನ
ಚಂಡಿಗಡ, ನ.3: ಸಮಾನ ಶ್ರೇಣಿ ಸಮಾನ ಪಿಂಚಣಿ (ಒಆರ್‌ಒಪಿ) ವಿಷಯಕ್ಕೆ ಸಂಬಂಧಿಸಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾಜಿ ಕೇಂದ್ರ ಸಚಿವ ಪವನ್ ಕುಮಾರ್ ಬನ್ಸಲ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಕಾಂಗ್ರೆಸ್ ಸ್ಥಳೀಯ ಘಟಕದ ಅಧ್ಯಕ್ಷ ಪ್ರದೀಪ್ ಛಾಬ್ರ ಅವರ ನೇತೃತ್ವದಲ್ಲಿ ಪಕ್ಷ ಕಚೇರಿಯಿಂದ ಆರಂಭವಾದ ರ್ಯಾಲಿಗೆ ಪೊಲೀಸರು ತಡೆಯೊಡ್ಡಿದರು. ಈ ವೇಳೆ ಮಾತನಾಡಿದ ಬನ್ಸಲ್, ಬುಧವಾರ ಸಂತ್ರಸ್ತ ಮಾಜಿ ಸೈನಿಕನ ಕುಟುಂಬ ವರ್ಗದವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಬಂಧಿಸಿರುವುದನ್ನು ಪಕ್ಷ ಖಂಡಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಧ್ವನಿಯನ್ನು ಹತ್ತಿಕ್ಕುವ ಯತ್ನ ನಡೆಯುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ 200 ಕಾರ್ಯ ಕರ್ತರನ್ನು ಬಂಧಿಸಲಾಗಿದೆ ಎಂದು ಪ್ರದೀಪ್ ಛಾಬ್ರ ತಿಳಿಸಿದರು. ಜಾಗೃತಿ ಪ್ರತಿಭಟನೆ ಎಂಬ ಹೆಸರಿನಲ್ಲಿ ನಡೆದ ಈ ಪ್ರತಿ ಭಟನೆಯಲ್ಲಿ ಒಆರ್‌ಒಪಿ ಯೋಜನೆಯನ್ನು ತಕ್ಷಣ ಜಾರಿ ಗೊಳಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಲಾಯಿತು.





