ಯಕ್ಷ ನೃತ್ಯತರಬೇತಿಗೆ ಅಮೇರಿಕಕ್ಕೆ ಕೆ.ಜೆ.ಗಣೇಶ್

ಉಡುಪಿ, ನ.3: ಕಿದಿಯೂರಿನ ಕೆ.ಜೆ. ಗಣೇಶ್ ಅಮೇರಿಕದ ಉತ್ತರ ಕ್ಯಾಲಿಪೋರ್ನಿಯಾದ ಕನ್ನಡಕೂಟ ಸಂಸ್ಥೆಯ ದೀಪೋತ್ಸವ ಕಾರ್ಯಕ್ರಮ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕನ್ನಡಕೂಟದ ಸದಸ್ಯರಿಗೆ ಯಕ್ಷನೃತ್ಯ ತರಬೇತಿ ನೀಡಲು ಅಮೇರಿಕಕ್ಕೆ ತೆರಳಲಿದ್ದಾರೆ.
ಹಿಂದೆ ನಾಲ್ಕು ಬಾರಿ ಇದೇ ಉದ್ದೇಶದಿಂದ ಅಮೇರಿಕಕ್ಕೆ ತೆರಳಿದ್ದು, ಈ ಬಾರಿ ಯಕ್ಷನೃತ್ಯ ತರಬೇತಿ ಜೊತೆಗೆ ‘ಜಾಂಬವತಿ ಕಲ್ಯಾಣ’ ಪ್ರಸಂಗವನ್ನು ನಿರ್ದೇಶಿಸಿ ಸ್ಮಿತ್‌ವಿಕ್ ಥಿಯೇಟರ್ ಫೂತಿಲ್ ಕಾಲೇಜು ಕ್ಯಾಲಿಪೋರ್ನಿಯಾದಲ್ಲಿ ಪ್ರದರ್ಶನ ನೀಡಲಿದ್ದಾರೆ.
ಎಳವೆಯಲ್ಲೇ ಯಕ್ಷಗಾನ ಕಲಾಸಕ್ತಿಯನ್ನು ಬೆಳೆಸಿಕೊಂಡು ಬಂದಿರುವ ಗಣೇಶ್, ನೃತ್ಯಾಭ್ಯಾಸವನ್ನು ಕೆ.ಬಾಬು ಶೆಟ್ಟಿಗಾರ್ ಅವರಲ್ಲಿ ಕಲಿತಿದ್ದಾರೆ. ಖ್ಯಾತ ಚೆಂಡೆವಾದಕ ಕೆಮ್ಮಣ್ಣು ಆನಂದ ಅವರಿಂದ ಚೆಂಡೆಮದ್ದಳೆಗಳ ಅಭ್ಯಾಸ ನಡೆಸಿದ್ದಾರೆ. ವಿದ್ವಾನ್ ಗಣಪತಿ ಭಟ್ ಮತ್ತು ವಿಠಲ ಪಾಟೀಲ್ ಅವರಿಂದ ಭಾಗವತಿಕೆ ಅಭ್ಯಾಸ ಮಾಡಿದ್ದಾರೆ. ಗಣೇಶ್ ಕೊಲಕಾಡಿ ಇವರಿಂದ ಯಕ್ಷಗಾನ ಛಂದಸ್ಸನ್ನು ಅಭ್ಯಾಸ ಮಾಡುತ್ತಿದ್ದಾರೆ. ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ ಮುಖ್ಯ ಭಾಗವತರಾಗಿದ್ದಾರೆ.
ಸಹೋದರರಾದ ಕೆ.ಜೆ.ಕೃಷ್ಣ ಮತ್ತು ಕೆ.ಜೆ. ಸುಧೀಂದ್ರರೊಂದಿಗೆ ಹಿಮ್ಮೇಳದಲ್ಲಿ ಕೆ.ಜೆ.ಸಹೋದರರೆಂದೇ ಪ್ರಸಿದ್ಧರಾಗಿದ್ದಾರೆ. ತರಬೇತುದಾರರಾಗಿ, ಭಾಗವತ ರಾಗಿ ಪ್ರಸಿದ್ಧಿ ಪಡೆದಿದ್ದಾರೆ.







