ಭಾರತೀಯ ಹೈಕಮಿಶನ್‌ನ 8 ಅಧಿಕಾರಿಗಳು ಬುಡಮೇಲು ಚಟುವಟಿಕೆಗಳಲ್ಲಿ ಶಾಮೀಲು: ಪಾಕಿಸ್ತಾನ ಆರೋಪ

ಇಸ್ಲಾಮಾಬಾದ್, ನ. 3: ಇಲ್ಲಿನ ಭಾರತೀಯ ಹೈಕಮಿಶನ್‌ನ ಎಂಟು ಅಧಿಕಾರಿಗಳು ಭಾರತೀಯ ಗುಪ್ತಚರ ಸಂಸ್ಥೆಗಳ ಸದಸ್ಯರಾಗಿದ್ದಾರೆ ಹಾಗೂ ‘ಬುಡಮೇಲು ಚಟುವಟಿಕೆ’ಗಳಲ್ಲಿ ಶಾಮೀಲಾಗಿದ್ದಾರೆ ಎಂಬುದಾಗಿ ಪಾಕಿಸ್ತಾನ ಇಂದು ಆರೋಪಿಸಿದೆ.
ತನ್ನ ವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆಯೊಂದನ್ನು ಓದಿದ ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರ ನಫೀಸ್ ಝಕಾರಿಯ, ಹಲವು ಭಾರತೀಯ ರಾಜತಾಂತ್ರಿಕರು ಹಾಗೂ ರಾಜತಾಂತ್ರಿಕ ಕಚೇರಿಯ ಸಿಬ್ಬಂದಿ, ರಾಜತಾಂತ್ರಿಕ ಕೆಲಸಗಳ ನೆಪದಲ್ಲಿ ಪಾಕಿಸ್ತಾನದಲ್ಲಿ ‘‘ಭಯೋತ್ಪಾದಕ ಮತ್ತು ಬುಡಮೇಲು ಚಟುವಟಿಕೆಗಳ ಸಮನ್ವಯ ಕಾರ್ಯ ನಡೆಸುತ್ತಿದ್ದಾರೆ’’ ಎಂದು ಆರೋಪಿಸಿದರು.
‘‘ಅವರ ಹೆಸರುಗಳು ಮತ್ತು ಹುದ್ದೆಗಳು ಹೀಗಿವೆ: ರಿಸರ್ಚ್ ಆ್ಯಂಡ್ ಎನಾಲಿಸಿಸ್ ವಿಂಗ್ (ರಾ)ನ ಅಧಿಕಾರಿಗಳು- ‘ರಾ’ದ ಕೇಂದ್ರೀಯ ಮುಖ್ಯಸ್ಥ ಅನುರಾಗ್ ಸಿಂಗ್, ಕಮರ್ಶಿಯಲ್ ಕೌನ್ಸೆಲರ್ ರಾಜೇಶ್ ಕುಮಾರ್ ಅಗ್ನಿಹೋತ್ರಿ, ವೀಸಾ ವಿಭಾಗದ ಅಮರ್‌ದೀಪ್ ಸಿಂಗ್, ಸಿಬ್ಬಂದಿ ಧರ್ಮೇಂದ್ರ ಸೋದಿ, ಸಿಬ್ಬಂದಿ ವಿಜಯಕುಮಾರ್ ವರ್ಮ ಮತ್ತು ಸಿಬ್ಬಂದಿ ಮಾಧವನ್ ನಂದ ಕುಮಾರ್’’ ಎಂದರು.
‘‘ಪ್ರೆಸ್ ಆ್ಯಂಡ್ ಇನ್‌ಫಾರ್ಮೇಶನ್ ಫಸ್ಟ್ ಸೆಕ್ರೆಟರಿ ಬಲ್ಬೀರ್ ಸಿಂಗ್ ಮತ್ತು ಸಹಾಯಕ ಸಿಬ್ಬಂದಿ ಕಲ್ಯಾಣ ಅಧಿಕಾರಿ ಜಯಾಲನ್ ಸೆಂದಿಲ್ ಭಾರತೀಯ ಗುಪ್ತಚರ ಬ್ಯೂರೋದ ಅಧಿಕಾರಿಗಳಾಗಿದ್ದಾರೆ’’ ಎಂದರು.
ಕೆಲವು ದಿನಗಳ ಹಿಂದೆ, ಪಾಕಿಸ್ತಾನದಿಂದ ‘ಅನಪೇಕ್ಷಿತ ವ್ಯಕ್ತಿ’ ಎಂಬುದಾಗಿ ಘೋಷಿಸಲ್ಪಟ್ಟಿದ್ದ ಸುರ್ಜೀತ್ ಸಿಂಗ್ ಕೂಡ ಭಾರತೀಯ ಗುಪ್ತಚರ ಸಂಸ್ಥೆಯ ಪ್ರತಿನಿಧಿಯಾಗಿದ್ದರು ಎಂದು ಅವರು ಆರೋಪಿಸಿದರು.
ತಾನು ಟೆಲಿಕಾಂ ಕಂಪೆನಿ ವಾರಿದ್‌ನ ಉದ್ಯೋಗಿ ಎಂಬುದಾಗಿ ತೋರಿಸುವ ನಕಲಿ ಗುರುತು ಚೀಟಿಯನ್ನು ಸುರ್ಜೀತ್ ಹೊಂದಿದ್ದರು ಎಂದು ಅವರು ಹೇಳಿಕೊಂಡರು.
ಭಾರತೀಯ ಪೊಲೀಸರು ಐಎಸ್‌ಐ ನಡೆಸುತ್ತಿದ್ದ ಬೇಹುಗಾರಿಕೆ ಜಾಲವೊಂದನ್ನು ಪತ್ತೆಹಚ್ಚಿದ ಬಳಿಕ ಭಾರತದಲ್ಲಿರುವ ಪಾಕಿಸ್ತಾನಿ ಹೈಕಮಿಶನ್‌ನ ಅಧಿಕಾರಿ ಮೆಹ್ಮೂದ್ ಅಖ್ತರ್ ವಿರುದ್ಧ ಭಾರತ ಕ್ರಮ ತೆಗೆದುಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಸುರ್ಜಿತ್‌ರನ್ನು ‘ಅನಪೇಕ್ಷಿತ ವ್ಯಕ್ತಿ’ ಎಂಬುದಾಗಿ ಪಾಕಿಸ್ತಾನ ಘೋಷಿಸಿತ್ತು.
‘‘ಭಾರತ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಹಾಗೂ ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸುವುದು ಮುಂತಾದ ಕೃತ್ಯಗಳಲ್ಲಿ ತೊಡಗಿಸಿ ಕೊಂಡಿರುವುದೇ ಅಲ್ಲದೆ, ತನ್ನ ಕುಕೃತ್ಯಗಳಿಗಾಗಿ ತನ್ನ ರಾಯಭಾರ ಕಚೇರಿಯನ್ನು ಬಳಸಿರುವುದರಿಂದ ನಮಗೆ ನಿರಾಶೆಯಾಗಿದೆ’’ ಎಂದರು.
‘ಬಲೂಚಿಸ್ತಾನ, ಸಿಂಧ್‌ಗಳಲ್ಲಿ ಅಸ್ಥಿರತೆ’
ಭಾರತೀಯ ಹೈಕಮಿಶನ್‌ನ ಅಧಿಕಾರಿಗಳು ಬೇಹುಗಾರಿಕೆ, ಬುಡಮೇಲು ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆ ಹಾಗೂ ಬಲೂಚಿಸ್ತಾನ ಮತ್ತು ಸಿಂಧ್, ಅದರಲ್ಲೂ ಮುಖ್ಯವಾಗಿ ಕರಾಚಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನೆ ನೀಡುತ್ತಿದ್ದಾರೆ. ಅವರು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ವಿಘ್ನ ಒಡ್ಡುತ್ತಿದ್ದಾರೆ ಹಾಗೂ ಈ ಎರಡು ರಾಜ್ಯಗಳಲ್ಲಿ ಅಸ್ಥಿರತೆ ಹುಟ್ಟುಹಾಕುತ್ತಿದ್ದಾರೆ ಎಂದು ಪಾಕಿಸ್ತಾನ ವಿದೇಶ ಕಚೇರಿಯ ವಕ್ತಾರ ನಫೀಸ್ ಝಕಾರಿಯ ಹೇಳಿಕೊಂಡರು.







