ಯೋಧನ ಈ ಸಾವು ನ್ಯಾಯವೇ?

ಈ ಬಾರಿಯ ದೀಪಾವಳಿಯನ್ನು ಪ್ರಧಾನಿ ಮೋದಿಯವರು ಸೈನಿಕರಿಗೆ ಅರ್ಪಿಸಿದ ಎರಡೇ ದಿನಗಳಲ್ಲಿ ನಿವೃತ್ತ ಯೋಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೀಪಾವಳಿಯನ್ನು ಸೈನಿಕರಿಗೆ ಅರ್ಪಿಸುತ್ತಿದ್ದೇನೆ ಎಂದು ಭಾವನಾತ್ಮಕ ಹೇಳಿಕೆಯ ಮೂಲಕ ಸೈನಿಕರ ಮೂಗಿಗೆ ಬೆಣ್ಣೆ ಸವರಿದಾಕ್ಷಣ ಅವರ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎನ್ನುವುದನ್ನು ಈ ದುರಂತ ನಮಗೆ ತಿಳಿಸಿದೆ. ನಿಜಕ್ಕೂ ಸೈನಿಕರ ಬದುಕನ್ನು ಮುಂದಿಟ್ಟುಕೊಂಡು ದೀಪಾವಳಿ ಆಚರಿಸುತ್ತಿರುವವರು ರಾಜಕಾರಣಿಗಳು. ದೀಪಾವಳಿಯನ್ನು ಸೈನಿಕರಾಗಲಿ, ಅವರ ಕುಟುಂಬದವರಾಗಲಿ ಯುದ್ಧ ಭೀತಿಯ ಜೊತೆಜೊತೆಗೆ ನೆಮ್ಮದಿಯಿಂದ, ಸಂಭ್ರಮದಿಂದ ಆಚರಿಸುವುದಕ್ಕೆ ಸಾಧ್ಯವಿಲ್ಲ. ಉಭಯ ದೇಶಗಳು ತಮ್ಮ ಗಡಿಗಳಲ್ಲಿ ಶಾಂತಿ ಕಾಪಾಡಲು ಗರಿಷ್ಠ ಕ್ರಮ ತೆಗೆದುಕೊಂಡಾಗಲಷ್ಟೇ ಉಭಯ ದೇಶಗಳ ಸೈನಿಕರು ಮತ್ತು ಅವರ ಕುಟುಂಬಸ್ಥರು ತಮ್ಮ ತಮ್ಮ ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸಿಯಾರು. ಹಾಗೆಯೇ, ಸೈನಿಕರ ನೋವುಗಳಿಗೆ, ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುವ ಮೂಲಕ ಅವರ ಪಾಲಿಗೆ ಹಬ್ಬವನ್ನು ಸಂಭ್ರಮವಾಗಿಸಬೇಕು. ತಮ್ಮ ಬೇಡಿಕೆಗಳಿಗಾಗಿ ನಿವೃತ್ತ ಯೋಧರೇ ಆತ್ಮಹತ್ಯೆಯಂತಹ ದಾರಿಗೆ ಮೊರೆ ಹೋಗಬೇಕಾದರೆ ಈ ದೇಶದಲ್ಲಿ ರೈತರ ಸ್ಥಿತಿ ಇನ್ನೆಷ್ಟು ಭೀಕರವಾಗಿರಬೇಡ? ‘ಸಮಾನ ಶ್ರೇಣಿ-ಸಮಾನ ಪಿಂಚಣಿ’ ಬೇಡಿಕೆಗಾಗಿ ಹೋರಾಟ ಮಾಡಿ, ಹತಾಶರಾಗಿ ಆತ್ಮಹತ್ಯೆಗೈದ ನಿವೃತ್ತ ಯೋಧರ ಆತ್ಮ ಇದನ್ನೇ ನರೇಂದ್ರ ಮೋದಿಯವರಿಗೆ ಕೂಗಿ ಕೂಗಿ ಹೇಳುತ್ತಿದೆ. ಆದರೆ ಮೋದಿಗಾಗಲಿ ಅವರ ಬಳಗಕ್ಕಾಗಲಿ ಅದನ್ನು ಕೇಳುವ ಇಚ್ಛೆಯೇ ಇಲ್ಲ. ಬದಲಿಗೆ ಅವರ ಸಾವನ್ನು ಕೇಂದ್ರ ಸರಕಾರದ ನಾಯಕರು ಹಾಸ್ಯಾಸ್ಪದಗೊಳಿಸಲು ಯತ್ನಿಸುತ್ತಿದ್ದಾರೆ. ಆ ಮೂಲಕ ಆತ್ಮಹತ್ಯೆಯ ಹೊಣೆಯಿಂದ ಪಾರಾಗುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ.
ಗಡಿಯಲ್ಲಿ ನಮ್ಮ ಸೈನಿಕರು ಎಂತಹ ಸ್ಥಿತಿಯಲ್ಲಿ ಈ ದೇಶದ ಕಾವಲು ಕಾಯುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದನ್ನು ನಾವೆಲ್ಲರೂ ಮಾಧ್ಯಮಗಳ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ಮೃತ ಯೋಧರ ಶವಪೆಟ್ಟಿಗೆಯಿಂದಲೂ ಕಮಿಷನ್ ಹೊಡೆಯುವ ರಾಜಕಾರಣಿಗಳು ನಮ್ಮ ನಡುವಿದ್ದಾರೆ. ಯೋಧರಿಗೆ ಒದಗಿಸುವ ಬೂಟುಗಳು, ಕೈಗವಚಗಳು ಮೊದಲಾದ ಮೂಲಭೂತ ಸಲಕರಣೆಗಳು ಅದೆಷ್ಟು ಕಳಪೆ ಎನ್ನುವುದನ್ನೂ ಮಾಧ್ಯಮಗಳು ಬಹಿರಂಗಪಡಿಸಿವೆ. ಇವುಗಳ ನಡುವೆ ನಿವೃತ್ತ ಯೋಧರು ಸಮಾನ ಪಿಂಚಣಿ, ಸಮಾನ ವೇತನ ಬೇಡಿಕೆಯನ್ನಿಟ್ಟುಕೊಂಡು ಕಳೆದ ಒಂದು ದಶಕದಿಂದ ಧರಣಿ ಮಾಡಿಕೊಂಡು ಬರುತ್ತಿದ್ದಾರೆ. ಅತ್ಯಂತ ವಿಷಾದನೀಯ ಸಂಗತಿಯೆಂದರೆ ಈ ನಿವೃತ್ತ ಸೈನಿಕರ ಧ್ವನಿಗೆ ಕಿವಿಯಾಗುವುದರ ಬದಲು ಸರಕಾರ ಇವರನ್ನು ಬಂಧಿಸಿ ಜೈಲಿಗೆ ಅಟ್ಟಿ ಇತಿಹಾಸವನ್ನು ದಾಖಲಿಸಿತು. ಒಂದೆಡೆ ಸೈನಿಕರನ್ನು ಬಾಯಿ ತುಂಬಾ ಹೊಗಳುತ್ತ ಸೇನೆಯ ಸಾಧನೆಗಳನ್ನು ತನ್ನ ಪಕ್ಷದ ಸಾಧನೆಗಳೋ ಎಂಬಂತೆ ಬಿಂಬಿಸುತ್ತಾ ಮಗದೊಂದೆಡೆ ಸೈನಿಕರ ಬೇಡಿಕೆಗಳನ್ನು ನಿಷ್ಕರುಣೆಯಿಂದ ದಮನಿಸುತ್ತಿದೆ. ಅದರ ಪರಿಣಾಮವಾಗಿಯೇ ಎರಡು ದಿನಗಳ ಹಿಂದೆ ನಿವೃತ್ತ ಯೋಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡುವಂತಹ ಸನ್ನಿವೇಶ ನಿರ್ಮಾಣವಾಯಿತು. ಒಂದೆಡೆ ಸರಕಾರ ಒಆರ್‌ಒಪಿ ಅಥವಾ ಸಮಾನವೇತನ ಸಮಾನ ಪಿಂಚಣಿಗೆ ಸ್ಪಂದಿಸಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತದೆ. ಮಗದೊಂದೆಡೆ ಸೈನಿಕರು ಸರಕಾರದ ದ್ವಂದ್ವ ಹೇಳಿಕೆಗಳನ್ನು ಬೀದಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಈ ಕುರಿತಂತೆ ಸ್ಪಷ್ಟೀಕರಣ ನೀಡಬೇಕಾಗಿರುವ ಸರಕಾರ ಪೊಲೀಸರ ಮೂಲಕ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ನೋಡುತ್ತಿದೆ. ನಿವೃತ್ತ ಯೋಧ ರಾಮಕಿಶನ್ ಮಾತ್ರವಲ್ಲ, ಅವರ ಜೊತೆಗೆ ನೂರಾರು ಯೋಧರು ಈ ಬೇಡಿಕೆಯಿಟ್ಟು ಸಾರ್ವಜನಿಕವಾಗಿ ಪ್ರತಿಭಟನೆಗಿಳಿದಿದ್ದಾರೆ. ಆದರೆ ವಿಪರ್ಯಾಸವೆಂದರೆ, ರಾಮಕಿಶನ್‌ರನ್ನು ಒಬ್ಬ ರಾಜಕೀಯ ಕಾರ್ಯಕರ್ತ ಎಂದು ಕರೆದು, ಅವರು ದೇಶಕ್ಕಾಗಿ ಮಾಡಿರುವ ಸೇವೆಯನ್ನು ಬಿಜೆಪಿ ನಾಯಕರು ಅವಮಾನಿಸಿದ್ದಾರೆ. ಕೇಂದ್ರದ ಇನ್ನೋರ್ವ ಸಚಿವರಂತೂ ‘‘ಆತ್ಮಹತ್ಯೆಗೆ ಬ್ಯಾಂಕ್ ಮಾಡಿರುವ ಎಡವಟ್ಟು ಕಾರಣ’’ ಎಂಬ ತೀರ್ಪನ್ನು ನೀಡಿ ಮುಖ ಉಳಿಸಿಕೊಳ್ಳಲು ನೋಡಿದ್ದಾರೆ. ಹರ್ಯಾನಾ ಮೂಲದ ಸುಬೇದಾರ್ ರಾಮ್‌ಕಿಶನ್ ಗ್ರೆವಾಲ್ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದವರು. ಒಂದು ವರ್ಷದ ಹಿಂದೆ ಒಆರ್‌ಒಪಿ (ಸಮಾನ ಶ್ರೇಣಿ ಸಮಾನ ಪಿಂಚಣಿ) ಯೋಜನೆಗೆ ಮೋದಿ ಒಪ್ಪಿಗೆ ನೀಡುವ ಮೊದಲು ರಾಮಕಿಶನ್‌ಗೆ ಪ್ರತೀ ತಿಂಗಳು 25,500ರೂ. ಪಿಂಚಣಿ ದೊರೆಯುತ್ತಿತ್ತು. ಒಆರ್‌ಒಪಿ ಯೋಜನೆಯ ಪ್ರಕಾರ ರಕ್ಷಣಾ ಪಡೆಯ ಸಮಾನ ಶ್ರೇಣಿಯ ಸಿಬ್ಬಂದಿಗಳು ಸಮಾನ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾದಲ್ಲಿ ಅವರಿಗೆ ಸಮಾನ ಪಿಂಚಣಿ ದೊರೆಯುತ್ತದೆ. ಇಲ್ಲಿ ನಿವೃತ್ತಿಯಾದ ದಿನವನ್ನು ಪರಿಗಣಿಸುವುದಿಲ್ಲ. ಇದರಂತೆ ರಾಮಕಿಶನ್ ತಿಂಗಳಿಗೆ ಹೆಚ್ಚುವರಿಯಾಗಿ 3 ಸಾವಿರ ಪಡೆಯಬೇಕಿತ್ತು. ಆದರೆ ಹೆಚ್ಚುವರಿ ಮೊತ್ತವೂ ಸಿಗಲಿಲ್ಲ, ಈ ಹಿಂದಿನ ಬಾಕಿ ಮೊತ್ತವೂ ದೊರಕಲಿಲ್ಲ. ಇದರಿಂದ ಮಾನಸಿಕ ವಾಗಿ ನೊಂದುಕೊಂಡು ಖಿನ್ನತೆಗೊಳಗಾದ ರಾಮಕಿಶನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡರು ಎನ್ನಲಾಗುತ್ತಿದೆ. ತಪ್ಪು ಎಲ್ಲಿ ನಡೆದಿದೆ ಎನ್ನುವುದನ್ನು ತನಿಖೆ ನಡೆಸುವ ಮೊದಲೇ ನಿವೃತ್ತ ಸೈನಿಕನೊಬ್ಬನ ನೋವು, ಹತಾಶೆ, ದುರಂತವನ್ನು ರಾಜಕೀಯಗೊಳಿಸಿ ರುವುದು ಬಿಜೆಪಿ ನಾಯಕರ ಸಮಯ ಸಾಧಕ ರಾಜಕಾರಣವನ್ನು ಹೇಳುತ್ತದೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಮೃತ ಯೋಧನ ಕುಟುಂಬವನ್ನು ಭೇಟಿ ಮಾಡಲು ಆಸ್ಪತ್ರೆಗೆ ತೆರಳಿದ್ದ ವಿರೋಧ ಪಕ್ಷದ ನಾಯಕರನ್ನು ಪೊಲೀಸರು ತಡೆದು ಅವರನ್ನು ಬಂಧಿಸಿರುವುದು. ಯಾವ ಕಾರಣಕ್ಕಾಗಿ ಬಂಧಿಸಲಾಯಿತು ಎನ್ನುವುದಕ್ಕೆ ಸರಕಾರದ ಬಳಿ ಸ್ಪಷ್ಟ ಉತ್ತರಗಳಿಲ್ಲ. ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಸಾಂತ್ವನ ಹೇಳುವುದು, ಅವರ ಪರವಾಗಿ ಮಾತನಾಡುವುದು ಕಾನೂನು ದೃಷ್ಟಿಯಲ್ಲಿ ಅಪರಾಧವೇ? ಹಾಗೆಯೇ ಮಾಧ್ಯಮಗಳ ಮುಂದೆ ಧ್ವನಿಯೆತ್ತಿದ ಮೃತ ಯೋಧನ ಮಕ್ಕಳನ್ನು ಬಂಧಿಸಿ ಪೊಲೀಸರು ಜೈಲಿಗೆ ತಳ್ಳಿದರು. ನಿಜಕ್ಕೂ ಸರಕಾರ ಯಾವುದೇ ತಪ್ಪು ಮಾಡಿಲ್ಲ ಎಂದರೆ ಮೃತ ಕುಟುಂಬದವರನ್ನು ಪೊಲೀಸರ ಮೂಲಕ ಬಾಯಿ ಮುಚ್ಚಿಸಲು ಹವಣಿಸುತ್ತಿರುವುದಾದರೂ ಯಾಕೆ? ಹಣತೆ ಹಚ್ಚಿ ದೀಪಾವಳಿ ಆಚರಿಸಬೇಕಾದ ಕುಟುಂಬ ಇಂದು ಯೋಧನ ಚಿತೆಗೆ ಬೆಂಕಿ ಹಚ್ಚಿ ರೋದಿಸುವ ಸ್ಥಿತಿಗೆ ತಾನೆಷ್ಟು ಕಾರಣ ಎನ್ನುವುದನ್ನು ಮೋದಿ ಇನ್ನಾದರೂ ಎದೆ ಮುಟ್ಟಿ ಕೇಳಿಕೊಳ್ಳಬೇಕಾಗಿದೆ. ಯೋಧ ಆತ್ಮಹತ್ಯೆಗೈಯುವುದಕ್ಕೆ ಕಾರಣರಾದವರು ಯಾರೇ ಇರಲಿ, ಅವರಿಗೆ ಶಿಕ್ಷೆಯಾಗಬೇಕು. ಹಾಗಾದಲ್ಲಿ ಮಾತ್ರ ಗಡಿಯಲ್ಲಿ ದೇಶಕಾಯುವ ಯೋಧರ ಎದೆಯಲ್ಲಿ ದೀಪಾವಳಿಯ ಬೆಳಕು ಹಬ್ಬೀತು.







