'ಭೋಪಾಲ್ ಎನ್‌ಕೌಂಟರ್': ಪ್ರತ್ಯಕ್ಷದರ್ಶಿ ನರೇಶ್ ಪಾಲ್ ನೋಡಿದ್ದೇನು ?

ಭೋಪಾಲ್, ನ.4: ದೀಪಾವಳಿ ಮರುದಿನ ಸೋಮವಾರ ನರೇಶ್ ಪಾಲ್ ಎಂಬವರು ಚಂದಾಪುರ ಗ್ರಾಮದ ತಮ್ಮ ಮನೆಯಿಂದ ಬೆಳಿಗ್ಗೆ 7ರ ಸುಮಾರಿಗೆ ಹೊರಟಾಗ ಸುಮಾರು 500 ಮೀಟರ್ ದೂರದಲ್ಲಿ ನದಿದಂಡೆಯಲ್ಲಿ ಎಂಟು ಮಂದಿ ಹೊಲದ ಹಾದಿ ಹುಡುಕುತ್ತಿದ್ದುದು ಕಾಣಿಸಿತು. ಅವರು ಮೀನುಗಾರರಿರಬೇಕು ಅಥವಾ ಪಕ್ಕದ ಗ್ರಾಮದವರಿರಬಹುದು ಎಂದು ಪಾಲ್ (24) ಯೋಚಿಸಿದರು. ಆದರೆ ಕೆಲವೇ ಗಂಟೆಗಳಲ್ಲಿ ಅವರ ಎಣಿಕೆ ತಪ್ಪು ಎನ್ನುವುದು ಅವರಿಗೆ ಖಚಿತವಾಯಿತು.
ಗ್ರಾಮದಿಂದ ಮೂರು ಕಿಲೋಮೀಟರ್ ಹೊರಗೆ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಎಂಟು ಮಂದಿ ಸಿಮಿ ಕಾರ್ಯಕರ್ತರನ್ನು ನೋಡಿದ ಮೊದಲ ವ್ಯಕ್ತಿ ಎನಿಸಿಕೊಂಡರು. "ಮೊದಲ ಬಾರಿ ಅವರನ್ನು ನೋಡಿದ ಅರ್ಧಗಂಟೆ ಬಳಿಕ ಅವರ ಪೈಕಿ ಮೂವರು ತೀರಾ ಸನಿಹದಲ್ಲಿ ಮತ್ತೆ ಕಾಣಿಸಿಕೊಂಡರು. ಇಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗುತ್ತಿತ್ತು. ಬೆಳಗ್ಗೆ ವಿದ್ಯುತ್ ಇದ್ದ ಕಾರಣ ನಾನು ನದಿಬದಿ ಇದ್ದ ಹೊಲಕ್ಕೆ ನೀರುಣಿಸುವ ಸಲುವಾಗಿ ಹೋಗುತ್ತಿದ್ದೆ. ನದಿ ದಂಡೆಯಲ್ಲಿ ಮೂವರು ಅಲೆದಾಡುತ್ತಿದ್ದರು. ಎಲ್ಲರೂ ಪ್ಯಾಂಟ್ ಹಾಗೂ ಶೂ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದರು. ಒಬ್ಬರ ಕೈಯಲ್ಲಿ ಬ್ಯಾಗ್ ಇತ್ತು. ಅವರಲ್ಲಿ ಯಾವ ಶಸ್ತ್ರಾಸ್ತ್ರವೂ ಇರಲಿಲ್ಲ.. ಉಳಿದ ಐದು ಮಂದಿ ನದಿಯಲ್ಲಿ ಇದ್ದಿರಬೇಕು..ನನಗೆ ಕಾಣಿಸಲಿಲ್ಲ. ನಾನು ಕೈ ಎತ್ತಿ ಜೈ ಶ್ರೀರಾಮ್ ಎಂದು ಹೇಳಿದೆ. ಆದರೆ ಯಾರೂ ಸ್ಪಂದಿಸಲಿಲ್ಲ" ಎಂದು ಪಾಲ್ ಘಟನೆಯನ್ನು ವಿವರಿಸಿದರು.
"ಎಂಟು ಗಂಟೆ ಸುಮಾರಿಗೆ ಮನೆಗೆ ಬಂದು ಟಿವಿ ಆನ್ ಮಾಡಿದೆ. ಆಗ ಜೈಲ್‌ಬ್ರೇಕ್ ಸುದ್ದಿ ಪ್ರಸಾರವಾಗುತ್ತಿತ್ತು. ನನಗೆ ಅನುಮಾನ ಬಂತು. ನನ್ನ ಫೋನ್ ನಿಷ್ಕ್ರಿಯವಾಗಿತ್ತು. ಮತ್ತೊಬ್ಬ ರೈತ ಜ್ಞಾನ್‌ಸಿಂಗ್‌ನಿಂದ ಫೋನ್ ಪಡೆದು, ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿದೆ. ನನ್ನಲ್ಲಿ ಮಾತನಾಡಿದ ಪೊಲೀಸ್, ಆ ವ್ಯಕ್ತಿಗಳು ಬಟ್ಟೆ ಬದಲಿಸುತ್ತಿದ್ದರೇ ಎಂದು ಕೇಳಿದ. ಎಟ್ಕೇಡಿಗೆ ಬರುವಂತೆ ಅವರು ಸೂಚಿಸಿದರು. ನಾನು ಸಾಧ್ಯವಿಲ್ಲ ಎಂದೆ"
ಜ್ಞಾನ್‌ಸಿಂಗ್ ಹಾಗೂ ಪಾಲ್ ಚಂದಾಪುರ ಬಸ್ತಿಗೆ ಹೋಗುತ್ತಿದ್ದಾಗ ಈ ವಿಷಯವನ್ನು ಇತರ ಗ್ರಾಮಸ್ಥರಿಗೆ ತಿಳಿಸಿದರು. ಸರಪಂಚ ಮೋಹನ್ ಸಿಂಗ್ ಮೀನಾ ಅವರಿಗೂ ವಿಷಯ ತಿಳಿಯಿತು. ಮತ್ತೊಂದು ಬಾರಿ ಪೊಲೀಸರಿಗೆ ಕರೆ ಮಾಡಲಾಯಿತು. ಬೆಳಗ್ಗೆ 10ರ ಸುಮಾರಿಗೆ ಎಟಿಎಸ್ ಸಿಬ್ಬಂದಿ ಅಲ್ಲಿಂದ ಮೂರು ಕಿಲೋಮೀಟರ್ ದೂರದ ಮಣಿಖೇಡಿ ಗ್ರಾಮಕ್ಕೆ ಬಂದರು. ಜನ ಬೆಟ್ಟ ಹತ್ತುತ್ತಿದ್ದುದು ಕಾಣಿಸುತ್ತಿತ್ತು. ಸ್ವಲ್ಪದೂರ ನಾನು ಅವರನ್ನು ಹಿಂಬಾಲಿಸಿದೆ. ಒಂದು ಕಡೆ ನನ್ನನ್ನು ನಿಲ್ಲುವಂತೆ ಸೂಚಿಸಿದರು. ಅಲ್ಲಿಂದ ಮುಂದೆ ಹೋಗಲು ಅವಕಾಶ ನೀಡಲಿಲ್ಲ'' ಎಂದು ಪಾಲ್ ವಿವರ ನೀಡಿದರು.
''ಸ್ವಲ್ಪಹೊತ್ತಿನಲ್ಲೇ ಪೊಲೀಸರು ಸುತ್ತಲ ಎಲ್ಲ ಪ್ರದೇಶಗಳಲ್ಲಿ ಕಾಣಿಸಿಕೊಂಡರು. ಎಂಟು ಮಂದಿ ಇದ್ದ ಬೆಟ್ಟ ಸುತ್ತುವರಿದರು. ದೂರದಿಂದ ಪಾಲ್‌ಗೆ ಬೊಬ್ಬೆ ಕೇಳುತ್ತಿತ್ತು. ಆದರೆ ಎರಡೂ ಕಡೆಯಿಂದ ಗುಂಡಿನ ಚಕಮಕಿ ಕೇಳಲಿಲ್ಲ. ಮೃತದೇಹಗಳೂ ಕಾಣಿಸಲಿಲ್ಲ. ಅಲ್ಲಿಗೆ ಹೋಗಲು ನಮಗೆ ಬಿಡುತ್ತಿರಲಿಲ್ಲ.''
ಬುಧವಾರವರೆಗೂ ಹಲವು ಮಂದಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಗುರುವಾರ ಗುಂಪು ಕಡಿಮೆಯಾಗಿದ್ದು, ಕಲ್ಲಿನ ಮೇಲೆ ರಕ್ತದ ಕಲೆಗಳು ಮಾತ್ರ ಉಳಿದಿವೆ.







