ಬಿಎಸ್ಎನ್ಎಲ್ ನಿಂದ ಕೋಟ್ಯಂತರ ರೂ. ಹಗರಣ!
ಮೋದಿ ಮೂಗಿನಡಿ ನಡೆದ ಅವ್ಯವಹಾರ

ಹೊಸದಿಲ್ಲಿ, ನ.4: ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿರುವಂತೆಯೇ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಹಾಗೂ ಅಮೇರಿಕನ್ ಬಹುರಾಷ್ಟ್ರೀಯ ಕಂಪೆನಿ ಸಿಸ್ಕೋ ಈಗಿನ ನ್ಯಾಷನಲ್ ಇಂಟರ್ನೆಟ್ ಬ್ಯಾಕ್ ಬೋನ್ (ಎನ್ಐಬಿ) ಮೂಲಭೂತ ಸೌಕರ್ಯವನ್ನು ವಿಸ್ತರಿಸುವ ನೆಪದಲ್ಲಿ ದೇಶಕ್ಕೆ 300 ಕೋಟಿ ರೂ. ನಷ್ಟವುಂಟು ಮಾಡಿವೆ ಎಂದು ‘ದಿ ಕ್ವಿಂಟ್’ ವರದಿಯೊಂದು ಹೇಳಿದೆ.
ಈ ಯೋಜನೆಯನ್ವಯ ಎರಡು ದೊಡ್ಡ ಪರ್ಚೇಸ್ ಆರ್ಡರುಗಳ ಮೊತ್ತದ ದೊಡ್ಡ ಭಾಗವೊಂದನ್ನು ನಿಧಿಯೊಂದಕ್ಕೆ ವರ್ಗಾಯಿಸಿ ಎರಡೂ ಕಂಪೆನಿಗಳ ಹಿರಿಯ ಅಧಿಕಾರಿಗಳು ಲಪಟಾಯಿಸಿದ್ದಾರೆಂದು ವರದಿ ತಿಳಿಸಿದೆ. ಬಿಎಸ್ಎನ್ಎಲ್ ಅಂತರ್ಜಾಲ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಎರಡು ಕಂಪೆನಿಗಳು ಸಹಭಾಗಿತ್ವ ಹೊಂದಿದ್ದವು.
ಈ ಅವ್ಯವಹಾರ ಸಂಬಂಧ ಭಾರತ ಮತ್ತು ಅಮೇರಿಕಾದಲ್ಲಿರುವ ಸಿಸ್ಕೋದ ಹಿರಿಯ ಅಧಿಕಾರಿಗಳು ಆಂತರಿಕ ತನಿಖೆ ಆರಂಭಿಸಿದ್ದಾರೆ. ಪ್ರಧಾನಿ ಕಾರ್ಯಾಲಯ, ಕೇಂದ್ರ ವಿಚಕ್ಷಣಾ ಆಯೋಗ ಹಾಗೂ ಟೆಲಿಕಾಂ ಇಲಾಖೆಗೂ ಈ ಹಗರಣದ ಬಗ್ಗೆ ಗೊತ್ತಿದ್ದರೂ ಇಲ್ಲಿಯ ತನಕ ಸರಕಾರ ಯಾವುದೇ ತನಿಖೆಗೆ ಆದೇಶಿಸಿಲ್ಲ.
ಅತ್ತ ಸಿಸ್ಕೋ ನಡೆಸುತ್ತಿರುವ ತನಿಖೆಯ ನೇತೃತ್ವವನ್ನು ಕಂಪೆನಿಯ ಇಂಗ್ಲೆಂಡ್ ಘಟಕದ ನಿರ್ದೇಶಕ ಸ್ಟೀವ್ ವಿಲಿಯಮ್ಸ್ ವಹಿಸಿದ್ದಾರೆ.
ಏನಿದು ಹಗರಣ
ಹೊಸದಿಲ್ಲಿ ಮೂಲದ ಪ್ರೆಸ್ಟೋ ಇನ್ಫೋ ಸೊಲ್ಯೂಶನ್ಸ್ ಸಂಸ್ಥೆ ಬಳಿ 95 ಕೋಟಿ ರೂ.ಮೌಲ್ಯದ ಆರ್ಡರನ್ನು ಬಿಎಸ್ಎನ್ಎಲ್ ಡಿಸೆಂಬರ್ 2015 ರಲ್ಲಿ ಇಟ್ಟಿತ್ತು. ಬಿಎಸ್ಎನ್ಎಲ್ ರೌಟರ್ ಗಳಿಗೆ ಸ್ಪೇರ್ ಪಾರ್ಟ್ಸ್ ಒದಗಿಸುವ ಬಗ್ಗೆ ಈ ಆರ್ಡರ್ ನೀಡಲಾಗಿತ್ತು. ಇಲ್ಲಿ ಗಮನಿಸತಕ್ಕ ಅಂಶವೆಂದರೆ ಸಿಸ್ಕೋ ಪ್ರಮಾಣೀಕೃತ ಪಾಲುದಾರ ಸಂಸ್ಥೆಗಳಾದ ಎಚ್ ಸಿ ಎಲ್, ವಿಪ್ರೋ, ಡೈಮೆನ್ಶನ್ ಡಾಟಾ ಹಾಗೂ ಐಬಿಎಂಗೆ ಆರ್ಡರ್ ನೀಡುವ ಬದಲು ಬಿಎಸ್ಎನ್ಎಲ್ 150 ಕೋಟಿ ರೂ. ವ್ಯವಹಾರಗಳುಳ್ಳ ಸಿಸ್ಕೋ ಪಾಲುದಾರ ಸಂಸ್ಥೆ ಪ್ರೆಸ್ಟೋವನ್ನು ಆಯ್ಕೆಗೊಳಿಸಿತ್ತು. ಟೆಂಡರ್ ಆಹ್ವಾನಿಸಿ ನಂತರ ಆರ್ಡರ್ ನೀಡಬೇಕೆಂಬ ನಿಯಮವನ್ನು ಈ ಮೂಲಕ ಉಲ್ಲಂಘಿಸಲಾಗಿತ್ತೆಂಬುದು ಆರೋಪವಾಗಿದೆ. ಮೇಲಾಗಿ ಬಿಎಸ್ಎನ್ಎಲ್ ತಾನು ಆರ್ಡರ್ ನೀಡಿದ ಕಂಪೆನಿಯ ಆರ್ಥಿಕ ಸ್ಥಿತಿಗತಿಗಳ ಬಗ್ಗೆಯೂ ಅಧ್ಯಯನ ನಡೆಸಿರಲಿಲ್ಲವೆಂದು ಹೇಳಲಾಗಿದೆ.
ಅತ್ತ ಪ್ರೆಸ್ಟೋ ತನ್ನ ಪರವಾಗಿ ಸಿಂಗಾಪುರ ಮೂಲದ ಇನ್ ಗ್ರಾಂ ಮೈಕ್ರೋ (ಸಿಸ್ಕೋ ವಿತರಕ ಸಂಸ್ಥೆ)ಗೆ 50 ಕೋಟಿ ರೂ. ಮೊತ್ತದ ಆರ್ಡರ್ ನೀಡಿ ಆ ಮೂಲಕ 45 ಕೋಟಿ ರೂ. ಲಾಭ ಗಳಿಸಿತ್ತು. ಲಭ್ಯ ದಾಖಲೆಗಳ ಪ್ರಕಾರ ಅಗತ್ಯ ಸಲಕರಣೆಗಳನ್ನು ಸ್ಥಾಪಿಸಲು ಪ್ರೆಸ್ಟೋ ಬಳಿ ಯಾವುದೇ ಸಾಮರ್ಥ್ಯವಿರಲಿಲ್ಲ ಹಾಗೂ ಈ ಆರ್ಡರನ್ನು 2016ರ ಮಾರ್ಚ್ 31ರ ಒಳಗಾಗಿ ಪೂರೈಸಲಾಗಲಿಲ್ಲವೆಂದು ತಿಳಿದು ಬಂದಿದೆ.
ಇನ್ನೊಂದು ಪ್ರಕರಣದಲ್ಲಿ 200 ಕೋಟಿ ರೂ. ಮೌಲ್ಯದ ಹೆಚ್ಚುವರಿ ಹಾರ್ಡ್ ವೇರ್ ಖರೀದಿ ಹಾಗೂ ಐದು ವರ್ಷದ ನಿರ್ವಹಣೆಗಾಗಿನ ಯೋಜನೆ ಜಾರಿಯಲ್ಲೂ ನಿಯಮ ಪಾಲಿಸಲಾಗಿಲ್ಲವೆಂದು ತಿಳಿದು ಬಂದಿದೆ.







