ಮೂಡುಬಿದಿರೆ: ಸಿಐಟಿಯು ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ
ಪೊಲೀಸರಿಂದ ಪಕ್ಷಪಾತ ಧೋರಣೆ ಆರೋಪ

ಮೂಡುಬಿದಿರೆ, ನ.4: ತಪ್ಪಿತಸ್ಥರರನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸಿ ಅವರಿಗೆ ರಾಜ ಮರ್ಯಾದೆಯನ್ನು ನೀಡುವ ಮೂಲಕ ಮೂಡುಬಿದಿರೆ ಠಾಣೆಯ ಪೊಲೀಸ್ ಅಧಿಕಾರಿಗಳು ಪಕ್ಷಪಾತಿ ಧೋರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೂಡುಬಿದಿರೆ ವಲಯದ ಸಿಐಟಿಯು, ಡಿವೈಎಫ್‌ಐ ಕಾರ್ಯಕರ್ತರು ಶುಕ್ರವಾರ ಮೂಡುಬಿದಿರೆ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಟನೆ ನಡೆಸಿದರು.
ಸಿಐಟಿಯು ಮೂಡುಬಿದಿರೆ ವಲಯದ ಅಧ್ಯಕ್ಷೆ ರಮಣಿ ಮಾತನಾಡಿ, ಸೆ.2ರಂದು ಬಂದ್ ವೇಳೆ ಇಡೀ ಮೂಡುಬಿದಿರೆಯ ಜನತೆ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಬಜರಂಗದಳ ಸಂಚಾಲಕ ಸೋಮನಾಥ ಕೋಟ್ಯಾನ್, ಬೆಳುವಾಯಿಯಲ್ಲಿರುವ ತನ್ನ ಅಂಗಡಿಯನ್ನು ಬಂದ್ ಮಾಡದೆ ದರ್ಪ ತೋರಿಸಿದ್ದಾರೆ. ಈ ಬಗ್ಗೆ ಸಿಐಟಿಯು ಕಾರ್ಯಕರ್ತರು ಪ್ರಶ್ನಿಸಿದಾಗ ಗುಂಪಿನಲ್ಲಿದ್ದ ಮಹಿಳೆಯರಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ, ಇಬ್ಬರು ಮಹಿಳೆಯರ ಮೇಲೆ ಅನುಚಿತ ವರ್ತನೆಯನ್ನು ತೋರಿಸಿದ್ದಾರೆ. ಈ ಕುರಿತು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದರೆ, ಆತನನ್ನು ಬಂಧಿಸುವ ಬದಲು ಠಾಣೆಂುಲ್ಲಿ ರಾಜಮರ್ಯಾದೆ ನೀಡುತ್ತಿದ್ದಾರೆ. ಪೊಲೀಸರಿಗೆ ಗೌರವ ಹಾಗೂ ಅವರಿಗೆ ಸಿಗಬೇಕಾದ ಸವಲತ್ತುಗಳ ಕುರಿತು ಸಿಐಟಿಯು ಸಂಘಟನೆ ಹೋರಾಟ ನಡೆಸಿದ, ಮೂಡುಬಿದಿರೆಗೆ ಮಹಿಳಾ ಪೊಲೀಸ್ ನೇಮಕವಾಗುವುದರ ಹಿಂದೆಯೂ ಸಂಘಟನೆಯ ಶ್ರಮವಿದೆ. ಆದರೆ ರಾಜಕೀಯ ಒತ್ತಡಕ್ಕೆ ಬಲಿಯಾಗಿ ಸೋಮನಾಥ ಕೋಟ್ಯಾನ್‌ರಿಗೆ ರಕ್ಷಣೆ ನೀಡುತ್ತಿರುವುದು ಸರಿಯಾದ ನೀತಿಯಲ್ಲ. ಇದು ಕೇವಲ ಸಾಂಕೇತಿಕ ಪ್ರತಿಭಟನೆಯಷ್ಟೇ, ಕಾರ್ಮಿಕರಿಗೆ, ಮಹಿಳೆಯರಿಗೆ ಹಾಗೂ ದಲಿತರಿಗೆ ಪೊಲೀಸ್ ಠಾಣೆಯಲ್ಲಿ ಸೂಕ್ತ ನ್ಯಾಯ ದೊರಕದಿದ್ದಲ್ಲಿ ತೀವ್ರವಾದ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಸಿಪಿಎಂ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಲಿಂಗಪ್ಪ ನಂತೂರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಸಿಐಟಿಯು ಮುಖಂಡರಾದ ಶಂಕರ್, ಗಿರಿಜಾ, ರಾಧಾ, ಸಂತೋಷ್ ಉಪಸ್ಥಿತರಿದ್ದರು. ಎಸಿಪಿ ರಾಜೇಂದ್ರ ಸ್ಥಳಕ್ಕೆ ಆಗಮಿಸಿ ಧರಣಿನಿರತರ ಅಹವಾಲು ಸ್ವೀಕರಿಸಿದರು. ತಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಆರೋಪಿಗಳ ರಕ್ಷಣೆ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಿದರು.
ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್, ಎಸೈ ದೇಜಪ್ಪ ಧರಣಿನಿರತರ ಜೊತೆ ಸಮಾಲೋಚನೆ ನಡೆಸಿದರು.







