ಜಿಲ್ಲಾ ಗ್ರಾಹಕ ವೇದಿಕೆ ಹೆಚ್ಚುವರಿ ಪೀಠಕ್ಕೆ ಚಾಲನೆ
6 ತಿಂಗಳಲ್ಲಿ 318 ಪ್ರಕರಣಗಳ ಇತ್ಯರ್ಥದ ಗುರಿ!

ಮಂಗಳೂರು, ನ.4: ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಹೆಚ್ಚುವರಿ ಪೀಠಕ್ಕೆ ನಗರದ ಮಣ್ಣಗುಡ್ಡೆಯಲ್ಲಿ ಇಂದು ಚಾಲನೆ ನೀಡಲಾಯಿತು.
ವೇದಿಕೆಯ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷೆ ಸಿ.ವಿ. ಶೋಭಾ ಚಾಲನೆ ನೀಡಿದರು. ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ 2012ರಿಂದ 2014ರವರೆಗಿನ ಒಟ್ಟು 318 ಪ್ರಕರಣಗಳನ್ನು ಹೆಚ್ಚುವರಿ ಪೀಠವು ಆರು ತಿಂಗಳ ಅವಧಿಯಲ್ಲಿ ಇತ್ಯರ್ಥಗೊಳಿಸಲು ರಾಜ್ಯ ವೇದಿಕೆಯು ನಿರ್ದೇಶನ ನೀಡಿದೆ ಎಂದರು.
2012ರ 144, 2013ರ 121 ಹಾಗೂ 2014ರ 53 ಪ್ರಕರಣಗಳು ಇಂದಿನಿಂದ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಹಾಗೂ ಸಂಜೆ 3ರಿಂದ 5 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿರುವ ಹೆಚ್ಚುವರಿ ಪೀಠದ ಮೂಲಕ ಇತ್ಯರ್ಥಗೊಳಿಸಲು ನಿಗದಿಪಡಿಸಲಾಗಿದೆ. ಈ ಹೆಚ್ಚುವರಿ ಅಧ್ಯಕ್ಷರಾಗಿ ವಿಶ್ವೇಶ್ವರ ಭಟ್ ಹಾಗೂ ಸದಸ್ಯರಾಗಿ ರಾಜಶೇಖರ್ ಕಾರ್ಯ ನಿರ್ವಹಿಸಲಿದ್ದಾರೆ. ಗ್ರಾಹಕರಿಗೆ ತೊಂದರೆ ಆಗದ ರೀತಿಯಲ್ಲಿ ಬಾಕಿ ಪ್ರಕರಣಗಳು ಶೀಘ್ರ ವಿಲೇವಾರಿಗೆ ಈ ಹೆಚ್ಚುವರಿ ಪೀಠದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಈ ಹಿಂದೆ ಸಿಬ್ಬಂದಿ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ಸಾಕಷ್ಟು ಪ್ರಕರಣಗಳು ಇತ್ಯರ್ಥಕ್ಕೆ ಸಮಸ್ಯೆಯಾಗಿತ್ತು. ಇದೀಗ ವೇದಿಕೆಗೆ ಅಧ್ಯಕ್ಷರು ಹಾಗೂ ಓರ್ವ ಸದಸ್ಯರು ಹಾಗೂ ಇಬ್ಬರು ಸಿಬ್ಬಂದಿಗಳನ್ನು ನೀಡಲಾಗಿದೆ. ಇದೇ ವೇಳೆ ಹೆಚ್ಚುವರಿ ಪೀಠಕ್ಕೂ ಸಿಬ್ಬಂದಿಯನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ದ.ಕ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚುವರಿ ಪೀಠಕ್ಕೆ ಚಾಲನೆ ದೊರೆಯುವ ಮೂಲಕ ಸಾಕಷ್ಟು ಕಾಲದ ಬೇಡಿಕೆ ಈಡೇರಿದಂತಾಗಿದೆ. ತಂತ್ರಜ್ಞಾನಗಳು, ಉತ್ಪನ್ನಗಳು ಹೆಚ್ಚಿದಂತೆಲ್ಲಾ ಗ್ರಾಹಕರ ಸಮಸ್ಯೆಗಳೂ ಹೆಚ್ಚುತ್ತವೆ. ಅದರಲ್ಲೂ ಜಿಲ್ಲೆಯ ಜನರು ಅತ್ಯಂತ ಜಾಗರೂಕರಾಗಿರುವುದರಿಂದ ಸಮಸ್ಯೆಗಳ ಬಗ್ಗೆ ಗ್ರಾಹಕ ನ್ಯಾಯಾಲಗಳ ಮೂಲಕ ಪರಿಹಾರಕ್ಕೆ ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಕ್ಷಿಪ್ರವಾಗಿ ವಿಲೇ ಮಾಡುವುದು ಅಗತ್ಯವಾಗಿದೆ. ಹೈಕೋರ್ಟ್‌ನ ಸಂಚಾರಿ ಪೀಠದಂತೆ ರಾಜ್ಯದ ಗ್ರಾಹಕ ನ್ಯಾಯಾಲಯದ ಸಂಚಾರಿ ಪೀಠವೂ ಜಿಲ್ಲೆಯಲ್ಲಿ ಸ್ಥಾಪನೆಯಾಗುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ಹೆಚ್ಚುವರಿ ಪೀಠದ ಅಧ್ಯಕ್ಷ ವಿಶ್ವೇಶ್ವರ ಭಟ್, ಸದಸ್ಯ ರಾಜಶೇಖರ್, ವೇದಿಕೆಯ ಸದಸ್ಯೆ ಲಾವಣ್ಯ ಎಂ. ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯ ಹಿರಿಯ ಸಿಬ್ಬಂದಿ ಅನಸೂಯ ಕಾರ್ಯಕ್ರಮ ನಿರೂಪಿಸಿದರು.







