ಎನ್‌ಡಿಟಿವಿ ವಿರುದ್ಧ ಕ್ರಮಕ್ಕೆ ಸಂಪಾದಕರ ಮಂಡಳಿಯಿಂದ ಖಂಡನೆ
‘‘ಇದು ತುರ್ತು ಪರಿಸ್ಥಿತಿ ನೆನಪಿಸುವ ನಿರ್ಬಂಧ’’

ಹೊಸದಿಲ್ಲಿ,ನ.4: ನ.9ರಂದು ಒಂದು ದಿನದ ಮಟ್ಟಿಗೆ ಎನ್‌ಡಿಟಿವಿ ಇಂಡಿಯಾ ವಾಹಿನಿಯನ್ನು ನಿಷೇಧಿಸುವ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಭಾರತೀಯ ಸಂಪಾದಕರ ಮಂಡಳಿ(ಇಜಿಐ)ಯು ಬಲವಾಗಿ ಖಂಡಿಸಿದೆ.
ಈ ನಿರ್ಧಾರವನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಹೇಳಿಕೆಯಲ್ಲಿ ಆಗ್ರಹಿಸಿರುವ ಮಂಡಳಿಯು, 2016,ಜ.2ರಂದು ಪಠಾಣಕೋಟ್ ವಾಯುನೆಲೆಯ ಮೇಲೆ ನಡೆದಿದ್ದ ಭಯೋತ್ಪಾದಕರ ದಾಳಿಯ ಕುರಿತು ಎನ್‌ಡಿಟಿವಿಯ ವರದಿಯಿಂದಾಗಿ ಭಯೋತ್ಪಾದಕರ ನಿರ್ವಾಹಕರಿಗೆ ಸೂಕ್ಷ್ಮ ಮಾಹಿತಿಗಳು ದೊರೆಯುವಂತಾಗಿತ್ತು ಎನ್ನುವುದು ನಿಷೇಧದ ಆದೇಶಕ್ಕೆ ಕಾರಣ ಎನ್ನಲಾಗಿದೆ. ದಾಳಿಯ ಕುರಿತಂತೆ ತನ್ನ ವರದಿಯು ಸಂಯಮದಿಂದ ಕೂಡಿತ್ತು ಮತ್ತು ಇತರ ಮಾಧ್ಯಮಗಳು ಬಹಿರಂಗಗೊಳಿಸಿದ್ದ ಯಾವುದೇ ಮಾಹಿತಿಗಳನ್ನು ಒಳಗೊಂಡಿರಲಿಲ್ಲ ಎಂದು ಎನ್‌ಡಿವಿ ಸಚಿವಾಲಯಕ್ಕೆ ನೀಡಿರುವ ತನ್ನ ಉತ್ತರದಲ್ಲಿ ಸ್ಪಷ್ಟಪಡಿಸಿದೆ ಎಂದು ಬೆಟ್ಟು ಮಾಡಿದೆ.
ವಾಹಿನಿಯನ್ನು ಒಂದು ದಿನದ ಅವಧಿಗೆ ನಿಷೇಧಿಸುವ ನಿರ್ಧಾರವು ಮಾಧ್ಯಮಗಳ ಸ್ಯಾತಂತ್ರದ ಮತ್ತು ತನ್ಮೂಲಕ ಭಾರತೀಯ ಪ್ರಜೆಗಳ ಸ್ವಾತಂತ್ರದ ನೇರ ಉಲ್ಲಂಘನೆ ಯಾಗಿದೆ ಮತ್ತು ಇದು ತುರ್ತು ಸ್ಥಿತಿಯನ್ನು ನೆನಪಿಸುವಂತಹ, ಸರಕಾರವು ಹೇರಿರುವ ಕಠೋರ್ ಸೆನ್ಸಾರ್ ಆಗಿದೆ. ಮಾಧ್ಯಮಗಳ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ವರದಿಯು ತನಗೆ ಒಪ್ಪಿತವಲ್ಲದಿದ್ದರೆ ನಿರಂಕುಶವಾಗಿ ದಂಡನಾ ಕ್ರಮವನ್ನು ಕೈಗೊಳ್ಳುವ ಅಧಿಕಾರವನ್ನು ಸರಕಾರ ತನಗೆ ತಾನೇ ಕೊಟ್ಟುಕೊಂಡಿರುವಂತಿದೆ ಮತ್ತು ಈ ಬ್ಲಾಕ್‌ಔಟ್ ಆದೇಶವು ಇದನ್ನೇ ಸೂಚಿಸುತ್ತಿದೆ ಎಂದಿರುವ ಮಂಡಳಿಯು, ಯಾವುದೇ ಬೇಜವಾಬ್ದಾರಿ ಮಾಧ್ಯಮ ವರದಿಯ ವಿರುದ್ಧ ನಾಗರಿಕರಿಗೆ ಮತ್ತು ಸರಕಾರಕ್ಕೆ ನಮ್ಮ ನ್ಯಾಯವ್ಯವಸ್ಥೆಯಲ್ಲಿ ವಿವಿಧ ಕಾನೂನು ಪರಿಹಾರಾತ್ಮಕ ಕ್ರಮಗಳಿವೆ. ನ್ಯಾಯಾಂಗದ ಹಸ್ತಕ್ಷೇಪ ಅಥವಾ ನಿಗಾ ಕೋರದೇ ನಿಷೇಧವನ್ನು ಹೇರುವುದು ಸ್ವಾತಂತ್ರ ಮತ್ತು ನ್ಯಾಯದ ಮೂಲಭೂತ ತತ್ತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ನಿಷೇಧ ನಿರ್ಧಾರವನ್ನು ಪ್ರಸಾರ ಸಂಪಾದಕರ ಸಂಘವು ಕೂಡ ಖಂಡಿಸಿದೆ. ಸರಕಾರದ ನಿರ್ಧಾರದ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿರುವ ಅದು, ನಿಷೇಧ ಹೇರಿಕೆಯು ಅಭಿವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗಿದ್ದು,ಇದನ್ನು ತಕ್ಷಣವೇ ಹಿಂದೆಗೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದೆ.







