ಪೆಟ್ರೋಲ್ ಪಂಪ್ ಗಳಲ್ಲಿ ಈ ರೀತಿ ನಿಮ್ಮನ್ನು ವಂಚಿಸುತ್ತಾರೆ , ಜೋಕೆ !
ಎಚ್ಚರ ತಪ್ಪಿದರೆ ನಷ್ಟ ಖಚಿತ

ಪುಣೆ,ನ.4: ಮಂಗಳವಾರ ಪುಣೆಯ ಬಾನೇರ್ ರಸ್ತೆಯಲ್ಲಿರುವ,ಸದಾ ಗ್ರಾಹಕರಿಂದ ಗಿಜಿಗಿಡುತ್ತಿರುವ ವೌಳಿ ಪೆಟ್ರೋಲ್ ಪಂಪ್‌ಗೆ ತೆರಳಿದ್ದ ಮೋಹನ ಕದಂ ತನ್ನ ಕಾರಿಗೆ 1000 ರೂ.ಗಳ ಪೆಟ್ರೋಲ್ ತುಂಬಿಸುವಂತೆ ಅಲ್ಲಿಯ ಸಿಬ್ಬಂದಿಗೆ ಸೂಚಿಸಿದ್ದರು. ಮೀಟರ್ 310 ರೂ.ತೋರಿಸುತ್ತಿದ್ದಾಗ ಆತ ಪೆಟ್ರೋಲ್ ಸುರಿಯುವುದನ್ನು ನಿಲ್ಲಿಸಿದ್ದ. ಸಾಮಾನ್ಯವಾಗಿ ಪೆಟ್ರೋಲ್ ಸುರಿಯುವುದನ್ನು ನಿಲ್ಲಿಸಿದಾಗ ಗ್ರಾಹಕರು ತಮ್ಮ ವಾಹನಗಳೊಂದಿಗೆ ಅಲ್ಲಿಂದ ನಿರ್ಗಮಿಸುತ್ತಾರೆ. ಮೀಟರ್ ನೋಡುವ ಗೋಜಿಗೆ ಹೋಗುವುದಿಲ್ಲ. ಆದರೆ ಕದಂ ಮೀಟರ್ ನೋಡಿದ್ದು, ಅದು 310 ರೂ.ಗೇ ನಿಂತಿದ್ದನ್ನು ಬೆಟ್ಟು ಮಾಡಿದ್ದರು. ಸಿಬ್ಬಂದಿ ಮತ್ತೆ ಪೆಟ್ರೋಲ್ ಸುರಿಯಲು ಆರಂಭಿಸಿದನಾದರೂ 690 ರೂ.ಗೆ ನಿಲ್ಲಿಸಿಬಿಟ್ಟಿದ್ದ. ಆಗ ಸುರಿದಿದ್ದು 310 ರೂ.ಪೆಟ್ರೋಲ್,ಈಗ ಸುರಿದಿದ್ದು 690 ರೂ.ಪೆಟ್ರೋಲ್....ಅಲ್ಲಿಗೆ 1000 ರೂ.ಸರಿಯಾಗಿದೆ ಎಂದು ಬಿಂಬಿಸುವ ಮೂಲಕ ಕದಂ ಕಿವಿಯ ಮೇಲೆ ಹೂವಿಡಲು ಪ್ರಯತ್ನಿಸಿದ್ದ.
ತನಗೆ ಟೋಪಿ ಹಾಕಲಾಗುತ್ತಿದೆ ಎನ್ನುವುದು ಗೊತ್ತಾದಾಗ ಕದಂ ಏರುಧ್ವನಿಯಲ್ಲಿ ಮಾತನಾಡಿದ್ದರು. ಅಲ್ಲಿಗೆ ಕೊರತೆಯಾಗಿದ್ದ 390 ರೂ.ವೌಲ್ಯದ ಪೆಟ್ರೋಲ್ ತುಂಬಿಸುವುದು ಸಿಬ್ಬಂದಿಗೆ ಅನಿವಾರ್ಯವಾಗಿತ್ತು. ಕದಂ ಸರಿಯಾದ ಸಮಯದಲ್ಲಿ ಈ ವಂಚನೆಯನ್ನು ಪತ್ತೆಹಚ್ಚಿದ್ದರು. ಕಳೆದೆರಡು ದಿನಗಳಲ್ಲಿ ಬಿಪಿಸಿಎಲ್‌ನ ಫ್ರಾಂಚೈಸಿಯಾಗಿರುವ ಈ ಪಂಪ್‌ನ ಹಲವಾರು ಗ್ರಾಹಕರು ಇಂತಹ ಕಡಿಮೆ ಪೂರೈಕೆಯ ಪ್ರಕರಣಗಳನ್ನು ಬೆಳಕಿಗೆ ತಂದಿದ್ದಾರೆ.
ವೌಳಿ ಪಂಪ್ ಈ ಪ್ರದೇಶದಲ್ಲಿಯ ಅತ್ಯಂತ ದೊಡ್ಡ ಪೆಟ್ರೋಲ್ ಪಂಪ್‌ಗಳಲ್ಲೊಂದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ದಿನನಿತ್ಯ ಸಾವಿರಾರು ವಾಹನಗಳು ಇಲ್ಲಿಗೆ ಬರುತ್ತವೆ.
ಹೆಚ್ಚಿನ ಪ್ರಕರಣಗಳಲ್ಲಿ ವಂಚನಾ ವಿಧಾನ ಅತ್ಯಂತ ಸರಳ ಮತ್ತು ಒಂದೇ ರೀತಿಯಾಗಿದೆ. ಸಿಬ್ಬಂದಿಗಳು ಗ್ರಾಹಕರು ತಿಳಿಸಿದಷ್ಟು ಇಂಧನವನ್ನು ಸುರಿಯದೆ ಅವರನ್ನು ಸಾಗಹಾಕುತ್ತಾರೆ ಮತ್ತು ಇದು ಗ್ರಾಹಕರಿಗೆ ಗೊತ್ತೂ ಆಗುವುದಿಲ್ಲ. ಪ್ರಶ್ನಿಸಿದಾಗ ಮತ್ತೆ ಇಂಧನ ಸುರಿಯಲು ಆರಂಭಿಸುತ್ತಾರೆ,ಆದರೆ ಮೀಟರ್‌ನ್ನು ಝೀರೊ ಮಾಡಿರುವುದಿಲ್ಲ. ಹೀಗಾಗಿ ಗ್ರಾಹಕರು ಸಾಕಷ್ಟು ಇಂಧನದ ಜೊತೆಗೆ ಹಣವನ್ನೂ ಕಳೆದುಕೊಳ್ಳುತ್ತಾರೆ.
ಇಂತಹ ಎಲ್ಲ ಪ್ರಕರಣಗಳಲ್ಲಿ ಈ ಸಿಬ್ಬಂದಿಗಳು ಆಟೋಮ್ಯಾಟಿಕ್ ಆಗಿ ಮುದ್ರಿತ ಬಿಲ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ನೀಡುತ್ತಾರೆ. ಏಕೆಂದರೆ ಇಂತಹ ಬಿಲ್ ವಂಚನೆಯನ್ನು ಬಹಿರಂಗಗೊಳಿಸುತ್ತದೆ. ಗ್ರಾಹಕ ಒತ್ತಾಯಿಸಿದರೆ ಕೈಯಿಂದ ಬರೆದ ಕ್ಯಾಷ್‌ಮೆಮೊ ನೀಡಿ ಸಾಗಹಾಕುತ್ತಾರೆ.
ಕದಂ ಈ ಮೋಸದ ಬಗ್ಗೆ ಬಿಪಿಸಿಎಲ್‌ನ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಿದ್ದು, ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ಅವರಿಗೆ ನೀಡಲಾಗಿದೆ.
ಇಂತಹ ವಂಚನೆಗಳು ನಡೆಯುತ್ತಿರುವುದು ನಮಗೆ ಗೊತ್ತಿದೆ. ಗ್ರಾಹಕರು ದೂರಿಕೊಂಡಾಗಲೆಲ್ಲ ಅವರಿಗೆ ಪೂರ್ಣ ಮೊತ್ತದ ಇಂಧನ ದೊರೆಯುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಹಲವಾರು ಬಾರಿ ನಮ್ಮ ಸಿಬ್ಬಂದಿಗಳನ್ನು ದಂಡಿಸಿದ್ದೇವೆ. ಎಷ್ಟೋ ಜನರನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ ಎಂದು ಪಂಪ್‌ನ ಮಾಲಕ ಸಂಜಯ ಮುರ್ಕುಟೆ ಸಮಜಾಯಿಷಿ ನೀಡಿದ್ದಾರೆ.
ಇಂತಹ ವಂಚನೆಗಳ ಕುರಿತು ನಮಗೆ ದೂರು ಸಲ್ಲಿಸಿದರೆ ತಕ್ಷಣ ಕ್ರಮ ಕೈಗೊಂಡು ಗ್ರಾಹಕರಿಗೆ ನ್ಯಾಯ ಒದಗಿಸುತ್ತಿದ್ದೇವೆ. ವಂಚನೆಗೊಳಗಾದಾಗ ಗ್ರಾಹಕರು ಸುಮ್ಮನಿರದೆ ನಮಗೆ ದೂರು ಸಲ್ಲಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಬಿಪಿಸಿಎಲ್‌ನ ಹಿರಿಯ ಮಾರಾಟ ಅಧಿಕಾರಿಯೋರ್ವರು ತಿಳಿಸಿದರು.







