ಸುಳ್ಯ: ನ.13ರಂದು ತಾಲೂಕು ಮಟ್ಟದ 6ನೆ ಹಿರಿಯರ ಕ್ರೀಡಾಕೂಟ
ಸುಳ್ಯ, ನ.4: 6ನೆ ಹಿರಿಯರ ಕ್ರೀಡಾಕೂಟ ನ.13ರಂದು ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂಜದ ಸುಳ್ಯ ತಾಲೂಕು ಹಿರಿಯರ ಕ್ರೀಡಾ ಸಂಘದ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಸಂಘಟನಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಸುಳ್ಯದ ಲಯನ್ಸ್, ರೋಟರಿ, ರೋಟರಿ ಸುಳ್ಯ ಸಿಟಿ, ವಿಷನ್ ಚಾರಿಟೇಬಲ್ ಟ್ರಸ್ಟ್, ಪಿಂಚಣಿದಾರರ ಸಂಘ, ಮಾಜಿ ಸೈನಿಕರ ಸಂಘ ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘಗಳ ಆಶ್ರಯದಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 6:45ಕ್ಕೆ ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಪಡ್ಡಂಬೈಲು ವೆಂಕಟ್ರಮಣ ಗೌಡ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಬಳಿಕ 5 ಕಿ.ಮೀ. ಮೈಲ್ ರೇಸ್ ಮತ್ತು 5 ಕಿ.ಮೀ. ನಡಿಗೆ ಸ್ಪರ್ಧೆಗಳು ನಡೆಯಲಿವೆ. 9:30ಕ್ಕೆ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಎನ್.ಎ.ರಾಮಚಂದ್ರ ಕ್ರೀಡಾಕೂಟ ಉದ್ಘಾಟಿಸಲಿದ್ದ್ದಾರೆ. ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ಚಿದಾನಂದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 100, 200, 400, 800, 1,500 ಮೀಟರ್ ಓಟ, ಗುಂಡೆಸೆತ, ಜಾವೆಲಿನ್ ಥ್ರೋ, ಚಕ್ರ ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್ ಸ್ಪರ್ಧೆಗಳು ನಡೆಯಲಿವೆ ಎಂದವರು ಹೇಳಿದರು.
ನ.26 ಹಾಗೂ 27ರಂದು ಪಂಜದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ನಡೆಯಲಿದ್ದು, ಭಾಗವಹಿಸುವ ಸ್ಥಳೀಯರಿಗೆ ನ.13ರವರಗೆ ನೋಂದಾವಣೆ ಮಾಡಿಸಲು ಅವಕಾಶ ನೀಡಲಾಗಿದೆ ಎಂದು ಸುಳ್ಯ ತಾಲೂಕು ಹಿರಿಯರ ಕ್ರೀಡಾ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ ಹೇಳಿದರು.
ಸಂಘಟನಾ ಸಮಿತಿ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ರಂಗಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಡಿ.ಎಸ್.ಗಿರೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.