ಸಿಮಿ ಕಾರ್ಯಕರ್ತರ ಎನ್‌ಕೌಂಟರ್ : ನ್ಯಾಯಾಂಗ ತನಿಖೆ ಆಗ್ರಹಕ್ಕೆ ಮಣಿದ ಮುಖ್ಯಮಂತ್ರಿ ಚೌಹಾಣ್

ಭೋಪಾಲ್,ನ.4: ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಜೈಲಿನಿಂದ ಎಂಟು ಸಿಮಿ ಕಾರ್ಯಕರ್ತರ ಪರಾರಿ ಮತ್ತು ಬಳಿಕ ಅವರ ಹತ್ಯೆ ಕುರಿತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಎಸ್.ಕೆ.ಪಾಂಡೆ ಅವರಿಂದ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಸೋಮವಾರ ನಡೆದಿದ್ದ ಈ ಎನ್‌ಕೌಂಟರ್ ಕುರಿತಂತೆ ಪೊಲೀಸರ ಹೇಳಿಕೆಗಳ ಬಗ್ಗೆ ಪ್ರತಿಪಕ್ಷಗಳು ಹಲವಾರು ಪ್ರಶ್ನೆಗಳನ್ನೆತ್ತಿದ್ದವು.
ರಾಜ್ಯ ಸರಕಾರವು ಈ ಹಿಂದೆ ಎನ್‌ಕೌಂಟರ್ ಕುರಿತಂತೆ ಸಿಐಡಿ ಅಧಿಕಾರಿಗಳಿಂದ ತನಿಖೆ ಮತ್ತು ಜೈಲಿನಿಂದ ಪರಾರಿ ಕುರಿತು ಮಾಜಿ ಡಿಜಿಪಿ ನಂದನ್ ದುಬೆ ಅವರಿಂದ ಪ್ರತ್ಯೇಕ ತನಿಖೆಯನ್ನು ಪ್ರಕಟಿಸಿತ್ತು. ಆದರೆ ಕಾಂಗ್ರೆಸ್ ಮತ್ತ ಇತರ ಪ್ರತಿಪಕ್ಷಗಳು ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದ್ದವು.
ಪಾಂಡೆ ಅವರು ಜೈಲುಗಳಲ್ಲಿ ಭದ್ರತಾ ವ್ಯವಸ್ಥೆಯ ಸುಧಾರಣೆಗಳ ಬಗ್ಗೆಯೂ ತನ್ನ ಶಿಫಾರಸುಗಳನ್ನು ಸಲ್ಲಿಸಲಿದ್ದಾರೆ ಎಂದು ರಾಜ್ಯದ ಗೃಹಸಚಿವ ಭೂಪೇಂದ್ರ ಸಿಂಗ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಚೌಹಾಣ್ ನೇತೃತ್ವದ ಬಿಜೆಪಿ ಸರಕಾರವು ಪೊಲೀಸರ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿತ್ತಲ್ಲದೆ, ಪ್ರತಿಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮತ್ತು ಕೋಮುವಾದವನ್ನು ಬೆರೆಸುತ್ತಿವೆ ಎಂದು ಆರೋಪಿಸಿತ್ತು.
ತನ್ಮಧ್ಯೆ,ರಾಜ್ಯ ಸರಕಾರವು ಬಚ್ಚಿಡುವುದೇನೂ ಇಲ್ಲವಾದ್ದರಿಂದ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಜೆಪಿ ಇಂದು ಹೇಳಿದೆ.
ಯಾವುದೇ ತನಿಖೆ ಅಗತ್ಯವಿದೆಯೆಂದು ತನಗೆ ಅನ್ನಿಸುತ್ತಿಲ್ಲ. ಆದರೆ ಶಿವರಾಜ್ ಸಿಂಗ್ ಚೌಹಾಣ್ ಅವರು ಬಚ್ಚಿಡುವಂಥದ್ದೇನೂ ಇಲ್ಲ, ಹೀಗಾಗಿ ಅವರು ನ್ಯಾಯಾಂಗ ತನಿಖೆಯ ಪ್ರತಿಪಕ್ಷಗಳ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಇದೇ ವೇಳೆ ಜೈಲಿನಲ್ಲಿ ಭದ್ರತೆಯ ಕೊರತೆಯಿತ್ತು ಮತ್ತು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಗಳನ್ನು ಸಚಿವರಿಗಾಗಿ ನಿಯೋಜಿಸಲಾಗಿತ್ತು ಎಂಬ ಆರೋಪಗಳನ್ನು ಬಂದೀಖಾನೆಗಳ ಸಚಿವೆ ಕುಸುಮ್ ಮೆಹ್ದೇಲಿ ಅವರು ತಿರಸ್ಕರಿಸಿದ್ದಾರೆ.
ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಗುರುವಾರ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಹ ಸಲ್ಲಿಸಲಾಗಿತ್ತು.







