ಕೇಂದ್ರ ಸರಕಾರದಿಂದ ಸಂವಿಧಾನವನ್ನು ಬುಡಮೇಲುಗೊಳಿಸುವ ಸಂಚು:ಹೈದರಲಿ ಶಿಹಾಬ್ ತಂಙಳ್
‘ಸಮಸ್ತ’ದಿಂದ ಶರೀಅತ್ ಸಂರಕ್ಷಣಾ ಬೃಹತ್ ರ್ಯಾಲಿ

ಮಲಪ್ಪುರಂ, ನ.4: ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಸಂವಿಧಾನವನ್ನು ಬುಡಮೇಲುಗೊಳಿಸುವ ಸಂಚು ಅಡಗಿದ್ದು, ಕೇಂದ್ರ ಸರಕಾರದ ಈ ಕುತಂತ್ರವನ್ನು ದೇಶದ ಪ್ರಜ್ಞಾವಂತ ಪ್ರಜೆಗಳು ಅರ್ಥಮಾಡಿಕೊಳ್ಳಬೇಕೆಂದು ಸಮಸ್ತದ ಉಪಾಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ ಕರೆ ನೀಡಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಮಲಪ್ಪುರಂನ ಶಂಸುಲ್ ಉಲಮಾ ನಗರದಲ್ಲಿ ಸಮಸ್ತ ಕೇರಳ ಜಂಇಯತುಲ್ ಉಲಮಾ ಹಮ್ಮಿಕೊಂಡಿದ್ದ ಶರೀಅತ್ ಸಂರಕ್ಷಣಾ ಬೃಹತ್ ರ್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಬಹುಸಂಸ್ಕೃತಿ ಹಾಗೂ ಜಾತ್ಯಾತೀತತೆಯನ್ನು ಗಣನೆಗೆ ತೆಗೆದುಕೊಂಡಿದ್ದ ನಮ್ಮ ಹಿರಿಯರು ರಚಿಸಿದಂತಹ ಸಂವಿಧಾನವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಇಸ್ಲಾಂನ ನಂಬಿಕೆಯ ಪ್ರಕಾರ ಬದುಕಬೇಕಾಗಿರುವ ಮುಸ್ಲಿಮರ ಧಾರ್ಮಿಕ ಹಕ್ಕನ್ನು ಕಸಿಯುವ ಪ್ರಯತ್ನ ಇದಾಗಿದೆ. ಜಾತ್ಯತೀತ ವ್ಯವಸ್ಥೆಯನ್ನು ವಿರೋಧಿಸುವ ಕೆಲವು ಕೋಮುವಾದಿ ಶಕ್ತಿಗಳ ಕುತಂತ್ರವೂ ಕೂಡ ಇದರಲ್ಲಿ ಅಡಗಿದ್ದು, ಸರಕಾರವು ಇಂತಹ ಅಕ್ರಮಗಳಿಂದ ದೂರ ಸರಿಯಬೇಕೆಂದು ಅವರು ಆಗ್ರಹಿಸಿದರು.
ಸ್ವಾಗತ ಸಮಿತಿ ಚೇರ್ಮಾನ್ ಹಾಜಿ ಕೆ. ಮುಹಮ್ಮದ್ ಫೈಝಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ. ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್ ಮುಖ್ಯ ಭಾಷಣಗೈದರು. ಪಾಣಕ್ಕಾಡ್ ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ದುಆಶಿರ್ವಚನಗೈದರು. ಸಮಸ್ತದ ಅಧ್ಯಕ್ಷ ಕುಮರಂಪುತ್ತೂರು ಎ.ಪಿ. ಮುಹಮ್ಮದ್ ಮುಸ್ಲಿಯಾರ್, ಕೇರಳ ವಿಧಾನಸಭೆ ವಿರೋಧಪಕ್ಷದ ಉಪನಾಯಕ ಪಿ.ಕೆ. ಕುಂಞಾಲಿಕುಟ್ಟಿ, ಸಂಸದರಾದ ಇ.ಟಿ. ಮುಹಮ್ಮದ್ ಬಶೀರ್, ಎಂ.ಎ. ಶಹನವಾಝ್, ಪಿ.ವಿ. ಅಬ್ದುಲ್ ವಹಾಬ್ ಮಾತನಾಡಿದರು.
ಡಾ. ಬಹಾವುದ್ದೀನ್ ನದ್ವಿ ಕೂರಿಯಾಡ್, ಅಬ್ದುಸ್ಸಮದ್ ಪೂಕೋಟುರು, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡ್ ವಿಷಯ ಮಂಡಿಸಿದರು.
ರ್ಯಾಲಿಯ ನಾಯಕತ್ವವನ್ನು ಸಮಸ್ತದ ಕೋಶಾಧಿಕಾರಿ ಸಯ್ಯದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ವಹಿಸಿದ್ದರು., ಜೊತೆ ಕಾರ್ಯದರ್ಶಿ ಕೋಟುಮಲ ಟಿ.ಎಂ. ಬಾಪು ಮುಸ್ಲಿಯಾರ್, ಉಪಾಧ್ಯಕ್ಷ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸೈಯದ್ ಮುನವ್ವರಲಿ ಶಿಹಾಬ್ ತಂಙಳ್, ಉಪಸ್ಥಿತರಿದ್ದರು. ರ್ಯಾಲಿಯಲ್ಲಿ ಸಾವಿರಾರು ಕಾರ್ಯರ್ತರು ಭಾಗವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಪ್ರ. ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು ಸ್ವಾಗತಿಸಿ, ಕೆ.ಎ. ರಹ್ಮಾನ್ ಫೈಝಿ ವಂದಿಸಿದರು.







