ಮಹಾರಾಷ್ಟ್ರ: 10ರ ಹರೆಯದ ವಿದ್ಯಾರ್ಥಿನಿಯ ಮೇಲೆ ಶಾಲಾ ಸಿಬ್ಬಂದಿಯಿಂದ ಅತ್ಯಾಚಾರ

ಬುಲ್ಧಾನಾ, ನ.4: ಮಹಾರಾಷ್ಟ್ರದ ಬುಲ್ಧಾನಾದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಸರಕಾರಿ ಅನುದಾನಿತ ಶಾಲೆಯೊಂದರ 10ರ ಹರೆಯದ ವಿದ್ಯಾರ್ಥಿನಿಯೊಬ್ಬಳ ಮೇಲೆ 22ರ ಹರೆಯದ ಸಿಬ್ಬಂದಿಯೊಬ್ಬ ಹಲವು ಬಾರಿ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ವರದಿಯಾಗಿದೆ.
ಬಾಲಕಿಯ ತಂದೆ ನೀಡಿರುವ ದೂರಿನನ್ವಯ 22 ಮಂದಿಯನ್ನು ಬಂಧಿಸಲಾಗಿದೆ. ಪ್ರಧಾನ ಆರೋಪಿಯು, ಮುಂಬೈಯಿಂದ 500 ಕಿ.ಮೀ. ದೂರವಿರುವ ಪಟ್ಟಣದ ಸನಿವಾಸ ಶಾಲೆಯೊಂದರ ಹಳೆ ವಿದ್ಯಾರ್ಥಿಯಾಗಿದ್ದಾನೆ.
ಕಳೆದ 3-4 ತಿಂಗಳಲ್ಲಿ ಆ ವ್ಯಕ್ತಿ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಇನ್ನಷ್ಟು ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದನ್ನು ಆಕರ ಪೊಲೀಸರಿಗೆ ತಿಳಿಸಿದ್ದಾಳೆನ್ನಲಾಗಿದೆ.
ಶಾಲೆಯ ಮ್ಯಾನೇಜರ್‌ಗೆ ಈ ಕೃತ್ಯದ ಬಗ್ಗೆ ತಿಳಿದಿತ್ತು. ಆತ ಪ್ರಕರಣವನ್ನು ಪೊಲೀಸರ ಬಳಿ ಒಯ್ಯದಂತೆ ತಡೆಯಲು ಪ್ರಯತ್ನಿಸಿದ್ದನೆಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಮ್ಯಾನೇಜರ್‌ನನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ.
ಬಾಲಕಿಯ ತಂದೆ, ಮಹಾರಾಷ್ಟ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಏಕನಾತ ಖಡ್ಸೆಯವರಲ್ಲಿ ಹೋದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಖಡ್ಸೆ ದೂರನ್ನು ರಾಜ್ಯದ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್‌ರಿಗೆ ಕಳುಹಿಸಿದ್ದಾರೆ.
ಶಾಲೆಯಲ್ಲಿ 105 ಮಂದಿ ಬಾಲಕಿಯರಿದ್ದು, ಇನ್ನಷ್ಟು ಮಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂದು ತಿಳಿಯಲು ಮಹಿಳಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಣಿಯೊಬ್ಬರ ನೇತೃತ್ವದಲ್ಲಿ ವಿಶೇಷ ತನಿಖೆ ತಂಡ ರಚಿಸಲಾಗಿದೆ.







