ಆಶ್ರಯ ಯೋಜನೆಯಡಿ 1,100 ಬಹುಮಹಡಿ ವಸತಿ ನಿಲಯ: ಶಾಸಕ ಜೆ.ಆರ್.ಲೋಬೊ

ಮಂಗಳೂರು, ನ.4: ಆಶ್ರಯ ಯೋಜನೆಯಡಿ ಶಕ್ತಿನಗರದ 10 ಎಕ್ರೆ ಪ್ರದೇಶದಲ್ಲಿ 1,100 ಮನೆಗಳನ್ನು ನಿರ್ಮಿಸುವ ಬಹುಮಹಡಿ ಕಟ್ಟಡ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದು ರಾಜ್ಯದಲ್ಲೇ ಮೊದಲ ಬಾರಿಗೆ ಜಾರಿಗೊಳಿಸುವ ಯೋಜನೆಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಶಕ್ತಿನಗರದಲ್ಲಿ ಶುಕ್ರವಾರ ಈ ಬಹುಮಹಡಿ ಮನೆಯನ್ನು ಪಡೆಯಲಿರುವ ಫಲಾನುಭವಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇಂದಿರಾ ಗಾಂಧಿ ಅವರ ಜನ್ಮಶತಮಾನೋತ್ಸವದ ನೆನಪಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಮಂಗಳೂರು ನಗರಪಾಲಿಕೆ ಈ ಯೋಜನೆಯನ್ನು ಜಾರಿಗೆ ತರುತ್ತಿವೆ. ಪರಿಶಿಷ್ಟ ಜಾತಿಯವರು 3.70 ಲಕ್ಷ ರೂ. ಅನುದಾನ ಮತ್ತು ಇತರ ಜಾತಿಯವರು 3.40 ಲಕ್ಷ ರೂ. ಅನುದಾನವನ್ನು ಪಡೆಯಲಿದ್ದಾರೆ ಎಂದು ಲೋಬೋ ತಿಳಿಸಿದರು.
5 ಲಕ್ಷ ರೂಪಾಯಿಯ ಮನೆಗಳನ್ನು ಫಲಾನುಭವಿಗಳು ಪಡೆಯಲಿದ್ದು, ಪರಿಶಿಷ್ಟರಿಗೆ ಕೇಂದ್ರ ಸರಕಾರ 1.5 ಲಕ್ಷ ರೂ.ವನ್ನು ಪ್ರಧಾನ ಮಂತ್ರಿ ಆವಾಝ್ ಯೋಜನೆಯಲ್ಲಿ ಮತ್ತು ರಾಜ್ಯ ಸರಕಾರ 1.80 ಲಕ್ಷ ರೂ. ಹಾಗೂ ಮಹಾನಗರ ಪಾಲಿಕೆ 1 ಲಕ್ಷ ರೂ. ನೀಡಲಿದೆ. ಇತರರಿಗೆ ನಗರ ಪಾಲಿಕೆ 70 ಸಾವಿರ, ರಾಜ್ಯ ಸರಕಾರ 1.2 ಲಕ್ಷ ರೂ. ಹಾಗೂ ಕೇಂದ್ರ ಸರಕಾರ 1.5 ಲಕ್ಷ ರೂ. ನೀಡಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಪರಿಶಿಷ್ಠರಿಗೆ 1.5 ಲಕ್ಷ ರೂ., ಇತರರಿಗೆ 1.3 ಲಕ್ಷ ರೂ. ಸಾಲ ನೀಡಲಿವೆ. ಈ ಹಣವನ್ನು ಪಿಗ್ಮಿ ಆಧಾರದಲ್ಲಿ ಪಾವತಿಸಬಹುದು. ಪರಿಶಿಷ್ಟರು ವೈಯಕ್ತಿಕ ಹಣವಾಗಿ ಕೇವಲ 20 ಸಾವಿರ ರೂ. ಮತ್ತು ಇತರರು 30 ಸಾವಿರ ರೂ.ವನ್ನು ಪಾವತಿಸಿ ಈ ವಸತಿ ನಿಲಯ ಪಡೆಯಬಹುದು ಎಂದರು.
ರಸ್ತೆ, ದಾರಿ ದೀಪ, ಕುಡಿಯುವ ನೀರು, ಆಟದ ಮೈದಾನ, ವಿಹಾರ ಕೇಂದ್ರ, ಬಸ್ ನಿಲ್ದಾಣ, ವಿದ್ಯುತ್ ಸೇವೆಗಳನ್ನು ಈ ಯೋಜನೆ ಒಳಗೊಂಡಿರುತ್ತದೆ. 18 ತಿಂಗಳಲ್ಲಿ ಕಟ್ಟಡ ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೆ 3 ಸಾವಿರ ಅರ್ಜಿಗಳ ಪೈಕಿ 1,100 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜೆ.ಆರ್.ಲೋಬೊ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‌ಗಳಾದ ಕೆ.ಭಾಸ್ಕರ್ ಮೊಯ್ಲಿ, ಅಖಿಲಾ ಆಳ್ವಾ, ಜುಬೇದಾ, ಮಾಜಿ ಮೇಯರ್ ಅಝೀಝ್, ಮನಪಾ ಜಂಟಿ ಆಯುಕ್ತ ಗೋಕುಲದಾಸ್ ನಾಯಕ್ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಸಕರಿಂದ ಕೀಳುಮಟ್ಟದ ರಾಜಕೀಯ
ಮಂಗಳೂರು, ನ.4: ನಿವೇಶನರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಜೆ.ಆರ್.ಲೋಬೋ ಶುಕ್ರವಾರ ಶಕ್ತಿನಗರದಲ್ಲಿ ನಡೆಸಿದ ‘ಫಲಾನುಭವಿಗಳ ಸಭಾ ಕಾರ್ಯಕ್ರಮ’ವು ಅಪ್ಪಟ ರಾಜಕೀಯದಿಂದ ಕೂಡಿದೆ ಎಂದು ನಿವೇಶನ ರಹಿತರ ಹೋರಾಟ ಸಮಿತಿಯು (ಮಂಗಳೂರು ನಗರ) ಆರೋಪಿಸಿದೆ.
ಶಾಸಕರು ನಿವೇಶನ ರಹಿತರಿಗೆ ಯಾವುದೇ ಮಾಹಿತಿ ನೀಡದೆ ಸಭೆಯನ್ನು ಕಾಂಗ್ರೆಸ್ ಸಭೆಯನ್ನಾಗಿ ಮಾಡಿದ್ದಾರೆ. ಈ ಯೋಜನೆಗೆ ಕೇಂದ್ರ ಸರಕಾರದ ನೆರವು ಇದ್ದರೂ ಕೂಡಾ ಶಾಸಕರು ಅದನ್ನು ಮರೆಮಾಚಿ ಇದು ಕಾಂಗ್ರೆಸ್ ಪಕ್ಷದ ಯೋಜನೆ ಎಂದು ಹೇಳಿರುವುದು ಖಂಡನೀಯ. ಇದು ಅವರ ಕೀಳುಮಟ್ಟದ ರಾಜಕೀಯ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







