ಶೀಘ್ರವೇ ಉಡುಪಿಗೆ ಹೈಟೆಕ್ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣ: ಸಚಿವ ರಾಮಲಿಂಗಾ ರೆಡ್ಡಿ

ಉಡುಪಿ, ನ.4: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಸೇವೆಯು ಕೆಎಸ್ಸಾರ್ಟಿಸಿ ಸಂಸ್ಥೆಯ ಧ್ಯೇಯವಾಗಿದ್ದು, ಒಂದೂವರೆ ವರ್ಷದೊಳಗಾಗಿ ಜಿಲ್ಲಾ ಕೇಂದ್ರವಾದ ಉಡುಪಿಯಲ್ಲಿ ಸುಸಜ್ಜಿತ ಜೆನರ್ಮ್ ಹಾಗೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ನಿಗಮದ ವತಿಯಿಂದ ಪುತ್ತೂರು ಗ್ರಾಮದ ನಿಟ್ಟೂರಿನ 2.60 ಎಕರೆ ಪ್ರದೇಶದಲ್ಲಿ ಸುಮಾರು 6.08 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಉಡುಪಿ ನಗರದ ನೂತನ ಜೆನರ್ಮ್ ಬಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಆದ್ಯತೆ ನೀಡಿ ಶಾಲಾ ಮಕ್ಕಳ ಸಂಚಾರಕ್ಕೆ ಅನುಕೂಲವಾಗುವ ಹಾಗೆ ಬಸ್ ಸೌಲ್ಯಗಳಿಲ್ಲದ ಪ್ರದೇಶಗಳಿಗೆ ಬಸ್‌ಗಳನ್ನು ಓಡಿಸಲಾಗುವುದು. ಸಾರ್ವಜನಿಕ ಸೇವೆಗೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ, ಹಿರಿಯರಿಗೆ, ವಿಕಲಚೇತನರಿಗೆ, ನಿತ್ಯ ಪ್ರಯಾಣಿಕರಿಗೆ ರಿಯಾಯಿತಿಯನ್ನು ಸಂಸ್ಥೆ ನೀಡುತ್ತಿದೆ. ಉತ್ತಮ ಗುಣಮಟ್ಟದ ಬಸ್ಸುಗಳು ಸಂಚರಿಸುತ್ತಿವೆ ಎಂದು ರೆಡ್ಡಿ ನುಡಿದರು.
ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ಎಲ್ಲಾ ನಗರ ಪ್ರದೇಶಗಳಲ್ಲಿ ನಗರ ಸಾರಿಗೆಯನ್ನು ಹೊಂದಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಇಲ್ಲಿ ಉಡುಪಿಯನ್ನು ಹೊರತು ಪಡಿಸಿ ಉಳಿದೆಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಿವೆ. ಇದೀಗ ಉಡುಪಿ ಬನ್ನಂಜೆಯಲ್ಲಿ ಲೋಕೊಪಯೋಗಿ ಇಲಾಖೆಯ 2.50 ಎಕರೆ ಪ್ರದೇಶ ಉಚಿತವಾಗಿ ಕೆಎಸ್ಸಾರ್ಟಿಸಿಗೆ ದೊರಕಿದ್ದು, ಅಲ್ಲಿ ಹೈಟೆಕ್ ಬಸ್‌ನಿಲ್ದಾಣವನ್ನು ನಿರ್ಮಿಸಲಾಗುವುದು. ಅಲ್ಲದೇ ನಗರ ಸಾರಿಗೆ ನಿಲ್ದಾಣಕ್ಕಾಗಿ ಹಳೆ ಡಿಡಿಪಿಐ ಕಚೇರಿಯಿದ್ದ 48 ಸೆಂಟ್ಸ್ ಜಾಗ ದೊರಕಿದ್ದು, ಅಲ್ಲೂ ಖಾಸಗಿಯವರ ಸಹಭಾಗಿತ್ವದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ಒಂದು ವರ್ಷದೊಳಗೆ ನಿರ್ಮಾಣಗೊಂಡು ಅದರ ಉದ್ಘಾಟನೆಗೂ ಆಗಮಿಸುವುದಾಗಿ ತಿಳಿಸಿದರು.
ಕೆಎಸ್ಸಾರ್ಟಿಸಿಗೆ ಈಗಾಗಲೇ ಅಗತ್ಯವಿರುವ 8027 ಸಿಬ್ಬಂದಿಗಳ ನೇಮಕಾತಿ ಮಾಡಲಾಗಿದ್ದು, ಇನ್ನೂ 5866 ಸಿಬ್ಬಂದಿ ನೇಮಕಾತಿಶೀಘ್ರದಲ್ಲೇ ನಡೆಯಲಿದೆ. ಇದರೊಂದಿಗೆ ನಿಗಮಕ್ಕೆ 4366 ಹೊಸ ಬಸ್‌ಗಳ ಸೇರ್ಪಡೆಯೂ ನಡೆಯಲಿದೆ ಎಂದರು. ನಿಗಮಕ್ಕೆ ಈವರೆಗೆ 147 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದು, ಇವುಗಳಲ್ಲಿ 78 ಪ್ರಶಸ್ತಿಗಳು ಕಳೆದ ಮೂರು ವರ್ಷಗಳಲ್ಲಿ ಬಂದಿವೆ ಎಂದು ರಾಮಲಿಂಗಾ ರೆಡ್ಡಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಉಡುಪಿ ಜಿಲ್ಲೆಗೆ ಅತ್ಯುತ್ತಮ ಗುಣಮಟ್ಟದ ಅತ್ಯಾಧುನಿಕ ನಿಲ್ದಾಣಗಳನ್ನು ಶೀಘ್ರದಲ್ಲೇ ನಿರ್ಮಿಸಬೇಕೆಂದು ಸಚಿವರಿಗೆ ಮನವಿ ಮಾಡಿದರಲ್ಲದೇ, ಖಾಸಗಿ ಸಿಟಿ ಬಸ್ ನಿಲ್ದಾಣ ಹಾಗೂ ನಗರ ಸಾರಿಗೆ ನಿಲ್ದಾಣದ ನಡುವೆ ಅಂಡರ್‌ಪಾಸ್‌ನ್ನು ನಿರ್ಮಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಲ್ಪಸಂಖ್ಯಾತ ನಿಗಮದ ನಿಯೋಜಿತ ಅಧ್ಯಕ್ಷ ಎಂ.ಎ.ಗಪೂರ್, ಮಾಜಿ ಶಾಸಕ ಬಸವರಾಜ್, ಜಿಪಂಸದಸ್ಯರಾದ ಜನಾರ್ದನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಕೆಎಸ್ಸಾರ್ಟಿಸಿ ಮಂಡಳಿ ನಿರ್ದೇಶಕರಾದ ಟಿ.ಕೆ. ಸುಧೀರ್, ರಮೇಶ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ ಉಪಸ್ಥಿತರಿದ್ದರು.
ಕರಾರಸಾ ನಿಗಮದ ಮಂಗಳೂರು ವಿಭಾಗದ ವಿಭಾಗ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ ಸ್ವಾಗತಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







