ಸಾಮಾಜಿಕ ಕಾರ್ಯಕರ್ತನ ಇಮೇಲ್ ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವರು
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ

ಪುತ್ತೂರು, ನ.4: ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಹಲವಾರು ಸಮಯಗಳಿಂದ ವಿವಿಧ ಸಮಸ್ಯೆಗಳಿದ್ದರೂ ಆರೋಗ್ಯ ಇಲಾಖೆ ಸೂಕ್ತವಾಗಿ ಸ್ಪಂದಿಸಲು ಮುಂದಾಗದೆ, ಸಮಸ್ಯೆಗಳಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಕುರಿತು ವಿವಿಧ ಪತ್ರಿಕೆಗಳು ವರದಿ ಮಾಡಿವೆ ಎಂದು ಪುತ್ತೂರು ತಾಲೂಕಿನ ಕಬಕ ನಿವಾಸಿಯಾದ ಸಾಮಾಜಿಕ ಕಾರ್ಯಕರ್ತ ಸಂಜೀವ ಎಂಬವರು ಇ-ಮೇಲ್ ಮೂಲಕ ರಾಜ್ಯದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಮನಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ತಕ್ಷಣವೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಪುತ್ತೂರು ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ವಿವಿಧ ಪತ್ರಿಕೆಗಳು ಸಕಾಲಿಕ ವರದಿ ಮಾಡಿ ಎಚ್ಚರಿಸಿದ್ದವು. ಆದರೆ ಆರೋಗ್ಯ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ವಾದಿಸುತ್ತಿದೆ. ಹೀಗಾಗಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಕುರಿತು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಂಜೀವ ಕಬಕ ಅವರು ಪತ್ರಿಕೆಗಳ ವರದಿ ಸಹಿತ ಸಚಿವರ ಗಮನ ಸೆಳೆದಿದ್ದರು.
ಮನವಿಗೆ ತಕ್ಷಣವೇ ಸ್ಪಂದಿಸಿದ ಸಚಿವರು ಈ ಕೂಡಲೇ ಸಂಬಂಧಿಸಿದವರನ್ನು ಸಂಪರ್ಕಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.







