ಶಬರಿಮಲೆ ಯಾತ್ರೆಗೆ ಸಜ್ಜಾಗುತ್ತಿರುವ ಕೇರಳ

ತಿರುವನಂತಪುರ,ನ.4: ಪ್ರಸಿದ್ಧ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ನ.15ರಿಂದ ಆರಂಭಗೊಳ್ಳಲಿರುವ ಮೂರು ತಿಂಗಳ ಅವಧಿಯ ‘ಮಂಡಲ ಪೂಜೆ ’ ಮತ್ತು ‘ಮಕರವಿಳಕ್ಕು ’ಯಾತ್ರೆಯು ಸುಗಮವಾಗಿ ನಡೆಯುವಂತೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ದೇವಸ್ವಂ ಮತ್ತು ವಿದ್ಯುತ್ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರು ಇಂದು ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು.
ಸಿದ್ಧತೆಗಳ ಅಂತಿಮ ಪರಿಶೀಲನೆಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಭಾರತದ ದೇವಸ್ವಂ ಸಚಿವರ ಸಭೆಯೊಂದು ನ.8ರಂದು ನಡೆಯಲಿದೆ ಎಂದರು.
ಉತ್ಸವದ ಅವಧಿಯಲ್ಲಿ ಸುಮಾರು ನಾಲ್ಕು ಕೋಟಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಸನ್ನಿಧಾನದ ಕಾಣಿಕೆ ಹುಂಡಿಗಳಲ್ಲಿ 109 ಕೋ.ರೂ.ಸಂಗ್ರಹವಾಗಿತ್ತು.
ಕಾರ್ಯಕ್ರಮಗಳ ಜಾರಿ ಕುರಿತಂತೆ ಸರಕಾರ ಮತ್ತು ಶಬರಿಮಲೆ ಕ್ಷೇತ್ರದ ಆಡಳಿತವನ್ನು ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವ ಮಂಡಳಿ(ಟಿಡಿಬಿ)ಯ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ಪ್ರತಿಪಕ್ಷಗಳ ಆರೋಪವನ್ನು ಸಚಿವರು ತಿರಸ್ಕರಿಸಿದರು.







