ಪ್ರಕರಣಗಳ ಬಾಕಿಯನ್ನು ತಡೆಯಲು ಹೈಕೋರ್ಟ್‌ಗಳಲ್ಲಿ ನಿವೃತ್ತ ನ್ಯಾಯಾಧೀಶರ ನೇಮಕಕ್ಕೆ ಸರಕಾರ-ನ್ಯಾಯಾಂಗ ಸಹಮತಿ

ಹೊಸದಿಲ್ಲಿ,ನ.4: ಹೆಚ್ಚುತ್ತಿರುವ ಪ್ರಕರಣಗಳ ಬಾಕಿಯನ್ನು ನಿಯಂತ್ರಿಸಲು ಪ್ರಾಮಾಣಿಕ ಮತ್ತು ಉತ್ತಮ ಸೇವಾ ದಾಖಲೆಯನ್ನು ಹೊಂದಿರುವ ನಿವೃತ್ತ ನ್ಯಾಯಾಧೀಶರನ್ನು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಲು ಸಂವಿಧಾನದ 224 ಎ ವಿಧಿಯನ್ನು ಈಗ ಬಳಸಿಕೊಳ್ಳಬಹುದಾಗಿದೆ ಎಂದು ಸರಕಾರ ಮತ್ತು ನ್ಯಾಯಾಂಗ ಸಹಮತಿ ವ್ಯಕ್ತಪಡಿಸಿವೆ.
ಈ ವರ್ಷದ ಎಪ್ರಿಲ್‌ನಲ್ಲಿ ನಡೆದಿದ್ದ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಾಧೀಶರ ಸಭೆಯ ನಡಾವಳಿಗಳನ್ನು ಆರು ತಿಂಗಳ ವಿರಾಮದ ಬಳಿಕ ಒಪ್ಪಿಕೊಳ್ಳಲಾಗಿದೆ. ಈ ನಡಾವಳಿಗಳಂತೆ ಉಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಪ್ರಾಮಾಣಿಕ ಮತ್ತು ದಕ್ಷ ಸೇವೆ ಸಲ್ಲಿಸಿದ ನಿವೃತ್ತರನ್ನು ಭಾರೀ ಪ್ರಮಾಣದಲ್ಲಿ ಪ್ರಕರಣಗಳುವಿಚಾರಣೆಗೆ ಬಾಕಿಯಿರುವ ಈ ಸಂದರ್ಭದಲ್ಲಿ ಸಂವಿಧಾನದ ವಿಧಿ 224 ಎ ಮೇರೆಗೆ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನಾಗಿ ನೇಮಿಸಬಹುದು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದರಂತೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ರಾಷ್ಟ್ರಪತಿಗಳ ಪೂರ್ವಾ ನುಮತಿಯೊಂದಿಗೆ ನಿವೃತ್ತ ನ್ಯಾಯಾಧೀಶರನ್ನು ಮರುನೇಮಕಕ್ಕೆ ಅಹ್ವಾನಿಸಬಹುದಾಗಿದೆ.
ದೇಶದ 24 ಉಚ್ಚ ನ್ಯಾಯಾಲಯಗಳಲ್ಲಿ ಸುಮಾರು 450 ನ್ಯಾಯಾಧೀಶರ ಕೊರತೆಯಿದೆ. ದೇಶಾದ್ಯಂತ ನ್ಯಾಯಾಲಯಗಳಲ್ಲಿ ಸುಮಾರು ಮೂರು ಕೋಟಿ ಪ್ರಕರಣಗಳು ವಿಚಾರಣೆಗಾಗಿ ಕಾದಿವೆ.





