ತಡೆಬೇಲಿಯಲ್ಲಿ ಸಿಲುಕಿದ್ದ ಚಿರತೆಯ ರಕ್ಷಣೆ

ಕುಂದಾಪುರ, ನ.4: ಬೇಟೆಗಾಗಿ ನಾಡಿಗೆ ಬಂದು ತಡೆಬೇಲಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಕಾರ್ಯಾಚರಣೆಯ ಮೂಲಕ ರಕ್ಷಿಸಿರುವ ಘಟನೆ ಹಟ್ಟಿಯಂಗಡಿ ಗ್ರಾಪಂ ವ್ಯಾಪ್ತಿಯ ಕನ್ಯಾನ ಕೂಡ್ಲು ಬಾಡಬೆಟ್ಟು ಎಂಬಲ್ಲಿ ಇಂದು ನಡೆದಿದೆ.
ಇಂದು ಬೆಳಗಿನ ಜಾವ ಹಟ್ಟಿಯಂಗಡಿ ರಾಮ್ ಭಟ್ ಎಂಬವರ ಹಾಡಿಯ ತಡೆಬೇಲಿಗೆ ಹೊಟ್ಟೆ ಭಾಗ ಸಿಲುಕಿಕೊಂಡು ಒದ್ದಾಡುತ್ತಿದ್ದ ಚಿರತೆ ಯನ್ನು ನೋಡಿದ ಸ್ಥಳೀಯರು ಬೆಳಗ್ಗೆ 10:30ರ ಸುಮಾರಿಗೆ ಕುಂದಾಪುರ ವಲಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗ ಮಿಸಿದ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು. ಅದಕ್ಕಾಗಿ ಕುಂದಾಪುರ ವಲಯ ಕಚೇರಿಯಿಂದ ಬೋನು ಮತ್ತು ಬಲೆಯನ್ನು ತರಿಸಲಾಯಿತು.
ಸ್ಥಳೀಯರ ಸಹಕಾರದೊಂದಿಗೆ ಸತತ ಮೂರು ಗಂಟೆಗಳ ಪ್ರಯತ್ನದಿಂದ ತಡೆಬೇಲಿಯಲ್ಲಿ ಸಿಲುಕಿ ಹಾಕಿಕೊಂಡ ಚಿರತೆಯನ್ನು ಮಧ್ಯಾಹ್ನ 2:30ರ ಸುಮಾರಿಗೆ ಬಲೆಯ ಸಹಾಯದಿಂದ ರಕ್ಷಿಸಲಾಯಿತು. ನಂತರ ಬೋನಿನಲ್ಲಿ ಹಾಕಿ ಚಿರತೆಯನ್ನು ವಂಡ್ಸೆಯ ಪಶು ವೈದ್ಯಾಧಿಕಾರಿಗಳಲ್ಲಿ ಪರೀಕ್ಷಿಸಲಾ ಯಿತು. ಆರೋಗ್ಯಕರವಾಗಿದ್ದ ಚಿರತೆಯನ್ನು ಸಂಜೆ ವೇಳೆ ಪಶ್ಚಿಮಘಟ್ಟಕ್ಕೆ ಬಿಡಲಾಯಿತು. ಇದು ನಾಲ್ಕೈದು ವರ್ಷ ಪ್ರಾಯದ ಗಂಡು ಚಿರತೆಯಾಗಿದೆ.
ಈ ಸಂದರ್ಭದಲ್ಲಿ ಚಿರತೆಯನ್ನು ನೋಡಲು ಸ್ಥಳದಲ್ಲಿ ಜನಸ್ತೋಮವೇ ನೆರದಿತ್ತು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾ ಯಿತು. ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಉಪವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್, ಹೇಮಾ, ಅರಣ್ಯ ರಕ್ಷಕ ಶಿವಕುಮಾರ್, ಸಿಬ್ಬಂದಿ ಉದಯ, ಅಶೋಕ ಮೊದಲಾದವರು ಇದ್ದರು.







