ಅಕ್ರಮ ಗೂಡಂಗಡಿಕಾರರ ಮೇಲೆ ಕ್ರಮಕೆ ಆಗ್ರಹ
ಸ್ಥಳೀಯ ಗೂಡಂಗಡಿಕಾರರಿಂದ ಜಿಲ್ಲಾಡಳಿತಕ್ಕೆ ಮನವಿ

ಕಾರವಾರ, ನ.4: ಮುರ್ಡೇಶ್ವರ ಕಡಲ ತೀರದಲ್ಲಿ ಸ್ಥಳೀಯರಲ್ಲದವರು ಅಕ್ರಮವಾಗಿ ಗೂಡಂಗಡಿ ಗಳನ್ನಿಟ್ಟು ವ್ಯಾಪಾರ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಆರೋಪವೀಗ ಸ್ಥಳೀಯ ಗೂಡಂಗಡಿಕಾರರ ಮೇಲೆ ಬರುತ್ತಿದ್ದು ಶೀಘ್ರ ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಒತ್ತಾಯಿಸಿ ಮುರ್ಡೇಶ್ವರದ ತಳ್ಳುಗಾಡಿ ಅಂಗಡಿಕಾರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಪ್ರವಾಸಿ ತಾಣವಾದ ಮುರ್ಡೇಶ್ವರ ಕಡಲ ತೀರದಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೆ, ಸಂಜೆ ಹೊತ್ತು ಇಲ್ಲಿನ ಕಡಲತೀರದಲ್ಲಿ ವಿಹರಿಸುವುದರಿಂದ ಕಡಲತೀರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರು ಗೂಡಂಗಡಿಗಳ ಮೂಲಕ ಸಣ್ಣಪುಟ್ಟ ವ್ಯಾಪಾರಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಡಲತೀರದ ಎಲ್ಲ ಗೂಡಂಗಡಿಕಾರರು ಸಂಘವೊಂದನ್ನು ನೋಂದಣಿ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕಡಲತೀರದಲ್ಲಿ ಪ್ರತಿದಿನ ವ್ಯಾಪಾರದ ಬಳಿಕ ಅಂಗಡಿ ಸುತ್ತಮುತ್ತ ಸ್ವಚ್ಛಗೊಳಿಸಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯಾಪಾರ ನಡೆಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಶ್ರೀಮಂತ ವ್ಯಕ್ತಿಗಳು ಸ್ಥಳೀಯರಲ್ಲದ ಕೆಲವರಿಗೆ ಸುಮಾರು 30 ಗೂಡಂಗಡಿ ಹಾಕಿಕೊಟ್ಟಿದ್ದಾರೆ. ಎಲ್ಲೆಂದರಲ್ಲಿ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಅಂಗಡಿ ಸುತ್ತಮುತ್ತ ಸ್ವಚ್ಛಗೊಳಿಸದೆ ಇರುವುದರಿಂದ ಕಡಲತೀರದಲ್ಲಿ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಘದವರಿಗೆ ಕೇಳಿದರೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ದೂರಿದ್ದಾರೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗಡಿಗಳಿಂದ ಪ್ರತಿ ತಿಂಗಳು ಮಾಸಿಕ ಬಾಡಿಗೆ ವಸೂಲಿ ಮಾಡುತ್ತಿರುವ ಮಾಫಿಯಾ ನಡೆಯುತ್ತಿದೆಯೇ ಎಂಬ ಅನುಮಾನ ಮೂಡಿದೆ. ಅಂಗಡಿಗಳನ್ನು ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಇಟ್ಟಿದ್ದು, ಎಲ್ಲ ಗೂಡಂಗಡಿಕಾರರಿಗೆ ಕೆಟ್ಟ ಹೆಸರು ಬರುತ್ತಿದೆ. ನಾವು ಕಳೆದ ಹಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಈಗ ಯಾರೋ ಮಾಡಿದ ತಪ್ಪಿಗೆ ಸ್ಥಳೀಯ ಗೂಡಂಗಡಿಕಾರರಿಗೆ ತೊಂದರೆಯಾಗುವ ಆತಂಕ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಳ್ಳುಗಾಡಿ ಮಾಫಿಯಾ ನಡೆಸುತ್ತಿರುವ ಮಾಲಕರ ಮೇಲೆ ಸೂಕ್ತ ಕ್ರಮ ಕೈಗೊಂಡು ಗೂಡಂಗಡಿಗಳನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.





