ಶಿಕ್ಷಣದಿಂದ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಸಾಧ್ಯ:ಸಚಿವ ಎಚ್. ಆಂಜನೇಯ
ಭೂಮಿ ಪೂಜೆ

ಹರಿಹರ, ನ.4: ಶಿಕ್ಷಣದ ಮೂಲಕ ಮಾತ್ರ ಸಮಾಜದಲ್ಲಿ ಹಿಂದುಳಿದ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ತಾಲೂಕಿನ ಬೆಳ್ಳೂಡಿ ಕನಕ ಶಾಖಾಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕೇಂದ್ರ ಕಾಮಗಾರಿಗೆ ಚಾಲನೆ ಹಾಗೂ ದೇವಸ್ಥಾನದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್‌ರವರು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ದಲಿತರು ಮತ್ತು ಅಸ್ಪೃಶ್ಯರು ಪಡೆಯಬೇಕೆಂದು ಸಾರಿದ್ದರು. ಅದರ ಅಡಿ ನಮ್ಮ ಸರಕಾರ ಎಲ್ಲಾ ಜಾತಿಯ ಬಡವರಿಗೆ ಅನ್ನಭಾಗ್ಯ, ವಿದ್ಯಾಸಿರಿ ಹಾಗೂ ಸಮಾಜದ ಎಲ್ಲ ವರ್ಗಗಳ ಮಠಮಾನ್ಯಗಳಿಗೆ ಭವನ ನಿರ್ಮಾಣಕ್ಕಾಗಿ ಅನುದಾನ ನೀಡಿದೆ. ಅಭಿವೃದ್ಧಿಗೆ ಶಿಕ್ಷಣ ಒಂದೇ ಮಂತ್ರವಾಗಿದ್ದು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷ 20 ಸಾವಿರ ಕೋಟಿ ಎಸ್‌ಪಿಟಿಪಿಎಸ್ ಕಾಯ್ದೆಯಂತೆ ಹಣ ವಿನಿಯೋಗಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಸಿಎಂ 2ನೆ ದೇವರಾಜ ಅರಸು:
ಮುಖ್ಯಮಂತ್ರಿ ಸಿದ್ದರಾಮಯ್ಯ ಬಡ ಕುಟುಂಬದಲ್ಲಿ ಜನಿಸಿದರೂ ಎಲ್ಲ್ಲ ವರ್ಗಗಳ ಜನರ ಕಾಳಜಿ ಹೊಂದುವ ಮೂಲಕ ಇವರು 2ನೆ ದೇವರಾಜು ಅರಸು ಆಗಿ ಆಡಳಿತ ನಡೆಸುತ್ತಿದ್ದಾರೆ. 1970ರಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ತರುವ ಮೂಲಕ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಸ್ವಾತಂತ್ರ್ಯ ನೀಡಿದವರು ಅರಸು. ಅಂದು ದಲಿತರು ಮತ್ತು ಹಿಂದುಳಿದವರು ಜೀತಮುಕ್ತ ಹೊಂದಿ ಸ್ವಾತಂತ್ರ್ಯವಾಗಿ ಬದುಕಲು ಅವಕಾಶ ಮಾಡಿಕೊಡಲಾಯಿತು. ಇದೀಗ ಮೂರು ದಶಮಾನಗಳ ನಂತರ ಮತ್ತೊಬ್ಬ ದೇವರಾಜು ಅರಸು ಸಿದ್ದರಾಮಯ್ಯ ರೂಪದಲ್ಲಿ ದಲಿತರು, ಹಿಂದುಳಿದವರು ಹಾಗೂ ಅತ್ಯಂತ ಹಿಂದುಳಿದ ಅಹಿಂದ ವರ್ಗಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಐಎಎಸ್ ಮತ್ತು ಕೆಎಎಸ್ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಶ್ರೀಗಳು ಮುಂದಾಗಿರುವುದು ಉತ್ತಮ ಕಾರ್ಯ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಅಗತ್ಯವಾಗಿ ನೀಡಬೇಕು. ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ನಿರಂಜನಾನಂದಪುರಿ ಶ್ರೀ, ಕಳೆದ ಬಾರಿ ಮುಖ್ಯಮಂತ್ರಿಗಳು ಮಠದ ಕಾರ್ಯಕ್ರಮಕ್ಕೆ ಆಗಮಿಸಿ 2 ಕೋಟಿ ರೂ.ಅನುದಾನ ಘೋಷಣೆ ಮಾಡಿದ್ದರು. ಆದರೆ, ಅದರಲ್ಲಿ ಕೇವಲ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಉಳಿದ ಹಣ ಕೂಡಲೇ ಬಿಡುಗಡೆ ಮಾಡಬೇಕು. ಮತ್ತು ಬೆಳ್ಳೂಡಿಮಠದ ಬಳಿ ಕೆಎಸ್ಸಾರ್ಟಿಸಿ ಬಸ್‌ಗಳ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲಿ ನಿರ್ಮಾಣವಾಗುತ್ತಿರುವ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ 50 ಲಕ್ಷ ಹಣ ನೀಡಬೇಕೆಂದು ಮನವಿ ಮಾಡಿದರು.
ಹೊಸದುರ್ಗದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಸಕ ಬಿ.ಜಿ. ಗೋವಿಂದಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ಕಾಂಗ್ರೆಸ್ ಮುಖಂಡ ಎಸ್. ರಾಮಪ್ಪ, ಜವಳಿ ಮತ್ತು ಮುಜರಾಯಿ ಇಲಾಖೆ ಖಾತೆ ಸಚಿವ ರುದ್ರಪ್ಪ ಲಮಾಣಿ ಮತ್ತಿತರರಿದ್ದರು.







