ಕಾಳಿಂಗ ಸರ್ಪದ ಮೊಟ್ಟೆ ಪ್ರಕರಣ: ಆರೋಪಿಗಳು ನಿರ್ದೋಷಿ
ನ್ಯಾಯಾಲಯದಿಂದ ತೀರ್ಪು ಪ್ರಕಟ

ಸಾಗರ, ನ.4: 2001ನೆ ಸಾಲಿನಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಾಳಿಂಗ ಸರ್ಪದ ಮೊಟ್ಟೆ ಪ್ರಕರಣದ ಆರೋಪಿಗಳನ್ನು ನಿರ್ದೋಷಿಗಳು ಎಂದು ಹೆಚ್ಚುವರಿ ವ್ಯವಹಾರ ನ್ಯಾಯಾಲಯದ ನ್ಯಾಯಾಧೀಶರೂ ಹಾಗೂ ನ್ಯಾಯಾಧಿಕ ದಂಡಾಧಿಕಾರಿ ಭಾಮಿನಿ ಅವರು ಬುಧವಾರ ತೀರ್ಪು ಪ್ರಕಟಿಸಿದ್ದಾರೆ. ದಿನಾಂಕ 14 ಜೂನ್ 2001ರಲ್ಲಿ ಹೆಗ್ಗೋಡು ಸಮೀಪದ ಹೈತೂರು ಅರಣ್ಯ ಪ್ರದೇಶದಲ್ಲಿ ಕಾಳಿಂಗ ಸರ್ಪ 62 ಮೊಟ್ಟೆಗಳನ್ನು ಇಟ್ಟಿತ್ತು. ಸ್ಥಳೀಯರು ಇದನ್ನು ಗಮನಿಸಿ ಕಾಳಿಂಗ ಸರ್ಪವನ್ನು ಓಡಿಸುವ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಮೊಟ್ಟೆಗಳು ಒಡೆದು ಹೋಗಿದ್ದವು.
ವಿಷಯ ತಿಳಿದ ಉರಗತಜ್ಞ ಮನ್ಮಥಕುಮಾರ್ ಉಳಿದ ಸುಮಾರು 40 ಮೊಟ್ಟೆಗಳನ್ನು ಸಂರಕ್ಷಿಸಿ, ಮರಿ ಮಾಡುವ ಉದ್ದೇಶದಿಂದ ತಮ್ಮ ಮನೆಗೆ ತಂದು ಜೋಪಾನ ಮಾಡಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಬಹಿರಂಗಗೊಂಡಿದ್ದರಿಂದ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಸಿಂಗ್ ಕೋಪಗೊಂಡು ಉರಗತಜ್ಞ ಮನ್ಮಥಕುಮಾರ್ ಹಾಗೂ ಛಾಯಾಚಿತ್ರಗಾರ ಕೃಷ್ಣ ಕಾಯ್ಕಿಣಿ ಅವರನ್ನು ವರದಹಳ್ಳಿ ರಸ್ತೆಯ ಪವಿತ್ರವನದಲ್ಲಿರುವ ಅರಣ್ಯ ಇಲಾಖೆಯ ಗೃಹದಲ್ಲಿ ಗೃಹಬಂಧನದಲ್ಲಿ ಇರಿಸಿ, ಸಿಬ್ಬಂದಿಯಿಂದ ದೈಹಿಕ ಹಲ್ಲೆ ನಡೆಸಿದ್ದರು. ನಂತರ ಮನ್ಮಥಕುಮಾರ್ ವಿರುದ್ಧ ಅರಣ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ವಿಷಯ ಬಾರಿ ಕೋಲಾಹಲಕ್ಕೆ ಕಾರಣವಾಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಸಿಂಗ್ ಹಾಗೂ ಅರಣ್ಯ ಇಲಾಖೆ ವಿರುದ್ಧ ಭಾರೀ ಪ್ರತಿಭಟನೆಯೂ ನಡೆದಿತ್ತು. ಇದರಿಂದ ಪುನಃ ಕುಪಿತಗೊಂಡ ಶಿವರಾಜ್ ಸಿಂಗ್ ಛಾಯಾಗ್ರಾಹಕ ಕೃಷ್ಣ ಕಾಯ್ಕಿಣಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದರು. ತಮ್ಮ ಮೇಲಿನ ಹಲ್ಲೆಗೆ ಸಂಬಂಧಿಸಿ ಮನ್ಮಥಕುಮಾರ್ ಮತ್ತು ಕೃಷ್ಣ ಕಾಯ್ಕಿಣಿರವರು ನಗರ ಠಾಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಸಿಂಗ್ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ನಾಲ್ಕೂ ಪ್ರಕರಣಗಳಲ್ಲೂ ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ.
ಶಿವರಾಜ್ ಸಿಂಗ್ ಪರವಾಗಿ ನ್ಯಾಯವಾದಿ ರಾಮಸ್ವಾಮಿ ಎಚ್.ಎಸ್., ನ್ಯಾಯವಾದಿ ಈಶ್ವರಪ್ಪ ನಾಯ್ಕಾ ಮತ್ತು ಮನ್ಮಥಕುಮಾರ್ ಹಾಗೂ ಕೃಷ್ಣ ಕಾಯ್ಕಿಣಿ ಪರವಾಗಿ ನ್ಯಾಯವಾದಿ ಪಿ.ಎನ್.ರಂಗನಾಥ್, ಸರಕಾರದ ಪರವಾಗಿ ಸುನೀತಾ ನಾಗೇಕರ್ ವಾದ ಮಂಡಿಸಿದ್ದರು.







