ಶಿವಮೊಗ್ಗ ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಟ್ಯಾಂಕರ್ ಮೂಲಕ ನೀರು ಪೂರೈಕೆ
_0.jpg)
ಶಿವಮೊಗ್ಗ, ನ. 4: ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದ್ದು, ಕೆಲ ಗ್ರಾಮಗಳಿಗೆ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತಗಳು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವ ಮಾಹಿತಿ ತಿಳಿದುಬಂದಿದೆ. ಇಂತಹ ಗ್ರಾಮಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆದು ನೀರು ಪೂರೈಸಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.
ಕುಡಿಯುವ ನೀರು ಪೂರೈಕೆ ಮಾಡುವ ಜಲಮೂಲದ ಅಂತರ್ಜಲ ಕುಸಿತ ಉಂಟಾದ ಪರಿಣಾಮ ತಾಲೂಕಿನ ಕೊಮ್ಮನಾಳು ಗ್ರಾಪಂ ವ್ಯಾಪ್ತಿಯ ಬೂದಿಗೆರೆ, ಆಲ್ದಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸ್ವರೂಪದ ತತ್ವಾರ ಉಂಟಾಗಿದೆ. ಕಳೆದ ಕೆಲ ದಿನಗಳ ಹಿಂದಿನಿಂದ ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿದ್ದಂತೆ ಗ್ರಾಪಂ ಆಡಳಿತವು ತ್ವರಿತಗತಿಯಲ್ಲಿ ಬೂದಿಗೆರೆ ಗ್ರಾಮದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯಿಸಿದ್ದು, ನೀರು ದೊರಕಿದೆ. ಪೈಪ್‌ಲೈನ್ ಹಾಗೂ ವಿದ್ಯುದ್ದೀಕರಣದ ಕೆಲಸ ನಡೆಯುತ್ತಿದ್ದು ಇಷ್ಟರಲ್ಲಿಯೇ ನೀರು ಪೂರೈಕೆಯಾಗಲಿದೆ ಎಂದು ಜಿಪಂ. ಆಡಳಿತ ಮೂಲಗಳು ಮಾಹಿತಿ ನೀಡುತ್ತವೆ. ತೀವ್ರ ಅಭಾವ:
ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ತೀವ್ರ ಸ್ವರೂಪದ ಕುಡಿಯುವ ನೀರಿನ ಹಾಹಾಕಾರ ಕಂಡುಬರುತ್ತಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹಲವು ಕಿ.ಮೀ. ಕ್ರಮಿಸಬೇಕಾಗಿರುವ ದುಃಸ್ಥಿತಿ ಎದುರಾಗಿದೆ. ವಾಲುಕೇಶಪುರ, ತ್ಯಾಜವಳ್ಳಿ, ಕೊನಗವಳ್ಳಿ, ವೀರಣ್ಣನ ಬೆನವಳ್ಳಿ, ಸುತ್ತುಕೋಟೆ ಮೊದಲಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಜಿಪಂ. ಮೂಲಗಳು ತಿಳಿಸಿವೆ. ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆರೆಕಟ್ಟೆ, ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲದ ಪ್ರಮಾಣ ಕುಸಿಯುತ್ತಿದೆ. ಜಲಮೂಲಗಳು ಬರಿದಾಗುತ್ತಿರುವುದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವ ಕಾಣಿಸಿಕೊಳ್ಳುತ್ತಿದೆ. ಇಂತಹ ಸ್ಥಳಗಳಲ್ಲಿ ಹೊಸ ಬೋರ್‌ವೆಲ್ ಕೊರೆಯುವುದು ಹಾಗೂ ಇತರೆ ಜಲಮೂಲಗಳಿಂದ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಈಗಲೇ ಈ ಪರಿಸ್ಥಿತಿಯಾದರೇ ಬೇಸಿಗೆ ದಿನಗಳು ಇನ್ನಷ್ಟು ಭೀಕರವಾಗಿರಲಿದೆ ಎಂದು ಜಿಪಂ.ನ ಅಧಿಕಾರಿಯೋರ್ವರು ಹೇಳುತ್ತಾರೆ.







