ಭಾರತದ ಗಡಿಯೊಳಗೆ ಚೀನಿ ಪಡೆಗಳು ನುಗ್ಗಿಲ್ಲ: ಚೀನಾ
ನಿಯಂತ್ರಣ ರೇಖೆಯ ಸ್ಥಿತಿಗತಿ ಬದಲಾಯಿಸುವ ಕ್ರಮಗಳು ಬೇಡ

ಬೀಜಿಂಗ್, ನ. 4: ಕಾಲುವೆಯ ಕೆಲಸವನ್ನು ನಿಲ್ಲಿಸಲು ತನ್ನ ಪಡೆಗಳು ಲಡಾಖ್ ವಲಯದ ಡೆಮ್‌ಚೋಕ್ ಪ್ರದೇಶದಲ್ಲಿರುವ ಭಾರತೀಯ ಭೂಪ್ರದೇಶಕ್ಕೆ ನುಗ್ಗಿವೆ ಎಂಬ ವರದಿಗಳನ್ನು ಚೀನಾ ಇಂದು ನಿರಾಕರಿಸಿದೆ. ಅದೇ ವೇಳೆ, ವಾಸ್ತವಿಕ ನಿಯಂತ್ರಣ ರೇಖೆಯ ಕುರಿತ ನಿಲುವನ್ನು ‘‘ಏಕಪಕ್ಷೀಯವಾಗಿ ಬದಲಾಯಿಸಬಲ್ಲ’’ ಯಾವುದೇ ಕ್ರಮಗಳನ್ನು ಉಭಯ ದೇಶಗಳು ತೆಗೆದುಕೊಳ್ಳಬಾರದು ಎಂದು ಅದು ಹೇಳಿದೆ.
‘‘ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಭಾಗದಲ್ಲಿ ಚೀನಾದ ಗಡಿ ಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂಬುದಾಗಿ ನಾನು ನಿಮಗೆ ಹೇಳಬಲ್ಲೆ. ಭಾರತ-ಚೀನಾ ಗಡಿಯನ್ನು ಇನ್ನಷ್ಟೇ ಗುರುತಿಸಬೇಕಾದರೂ, ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡು ಬರಲು ಉಭಯ ದೇಶಗಳು ಹಲವು ಒಪ್ಪಂದಗಳು ಮತ್ತು ಒಮ್ಮತಗಳ ಮೂಲಕ ನಿರ್ಧರಿಸಿವೆ’’ ಎಂದು ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಹೇಳಿದರು.
ಲಡಾಖ್ ವಲಯದ ಎತ್ತರದ ಶೀತಲ ಪ್ರದೇಶದಲ್ಲಿ ‘ಮನರೇಗ’ ಯೋಜನೆಯನ್ವಯ ನೀರಾವರಿ ಕಾಲುವೆಯೊಂದನ್ನು ನಿರ್ಮಿಸಲಾಗುತ್ತಿದೆ. ಅಲ್ಲಿಗೆ ಪ್ರವೇಶಿಸಿದ ಚೀನಾದ ಸೈನಿಕರು ಪೌರ ಯೋಜನೆಯನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದ ಲಡಾಖ್ ವಲಯದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಬಿಕ್ಕಟ್ಟು ನೆಲೆಸಿದೆ ಎಂದು ವರದಿಯಾಗಿದೆ.
‘‘ಈ ವಿಷಯವನ್ನು ಭಾರತೀಯ ಮಾಧ್ಯಮಗಳು ಮತ್ತೊಮ್ಮೆ ಪ್ರಸಾರ ಮಾಡಿವೆ’’ ಎಂದು ಡೆಮ್‌ಚಾಕ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಬಿಕ್ಕಟ್ಟು ನೆಲೆಸಿರುವ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದದ ಹುವಾ ನುಡಿದರು.
‘‘ವಾಸ್ತವಿಕ ನಿಯಂತ್ರಣ ರೇಖೆಯ ಸ್ಥಿತಿಗತಿಯನ್ನು ಬದಲಾಯಿಸಬಲ್ಲ ಯಾವುದೇ ಕ್ರಮಗಳನ್ನು ಉಭಯ ಬಣಗಳು ತೆಗೆದುಕೊಳ್ಳಬಾರದು’’ ಎಂದು ಕಾಲುವೆ ಕಾಮಗಾರಿಯನ್ನು ಗಮನದಲ್ಲಿರಿಸಿ ಅವರು ಹೇಳಿದರು.







