29 ವರ್ಷಗಳ ಬಳಿಕ ಭಾರತದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ
*1987ರಲ್ಲಿ ಕೊನೆಯ ಬಾರಿ ಐದು ಟೆಸ್ಟ್ ಸರಣಿ

ಹೊಸದಿಲ್ಲಿ,ನ.4: ನಿಮಗೆ ಗೊತ್ತೇ ಭಾರತದಲ್ಲಿ ಐದು ಟೆಸ್ಟ್‌ಗಳ ಸರಣಿ ಆಡಿದ್ದು ಯಾವಾಗ ? ಆಗ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿರಲಿಲ್ಲ. ಆಗ ಅವರು 13ರ ಹರೆಯದ ಶಾಲಾ ಬಾಲಕ. ಎಂಎಸ್ ಧೋನಿಗೆ 6 ವರ್ಷ. ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ನೂ ಹುಟ್ಟಿರಲಿಲ್ಲ.
29 ವರ್ಷಗಳ ಹಿಂದೆ ಅದರೆ 1987ರಲ್ಲಿ ಭಾರತದಲ್ಲಿ ಐದು ಟೆಸ್ಟ್‌ಗಳ ಸರಣಿ ನಡೆದಿತ್ತು.ಪಾಕಿಸ್ತಾನ ತಂಡದ ವಿರುದ್ಧ ಭಾರತ ಐದು ಟೆಸ್ಟ್‌ಗಳ ಸರಣಿ ಆಡಿತ್ತು. ಪಾಕಿಸ್ತಾನ ಈ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ನಾಲ್ಕು ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿತ್ತು. ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಅವರಿಗೆ ಇದು ಕೊನೆಯ ಟೆಸ್ಟ್ ಸರಣಿ ಆಗಿತ್ತು.
ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮಾರ್ಚ್ 13ರಿಂದ 17ರ ತನಕ ನಡೆದ ಕೊನೆಯ ಟೆಸ್ಟ್‌ನಲ್ಲಿ 16 ರನ್‌ಗಳ ಅಂತರದಿಂದ ಸೋತು ಸರಣಿಯನ್ನು 1-0 ಅಂತರದಲ್ಲಿ ಪಾಕಿಸ್ತಾನಕ್ಕೆ ಒಪ್ಪಿಸಿತ್ತು. ವಿದಾಯದ ಟೆಸ್ಟ್‌ನಲ್ಲಿ ಸುನೀಲ್ ಗವಾಸ್ಕರ್ ಸೋಲಿನೊಂದಿಗೆ ವಿದಾಯ ಹೇಳಿದರು. ಅವರು ಇದರ ಜೊತೆಗೆ ಶತಕ ವಂಚಿತಗೊಂಡಿದ್ದರು. ಗವಾಸ್ಕರ್ ಎರಡನೆ ಇನಿಂಗ್ಸ್‌ನಲ್ಲಿ 96 ರನ್ ಗಳಿಸಿ ಔಟಾಗಿದ್ದರು.
ಪಾಕಿಸ್ತಾನ ವಿರುದ್ಧದ ಸರಣಿಯ ಬಳಿಕ ಭಾರತದಲ್ಲಿ 4 ಟೆಸ್ಟ್‌ಗಳ ಸರಣಿ 6 ಬಾರಿ ನಡೆದಿತ್ತು. 1987-88ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಆಸ್ಟ್ರೇಲಿಯ ವಿರುದ್ಧ 2004, 2008, ಮತ್ತು 2013ರಲ್ಲಿ , ಇಂಗ್ಲೆಂಡ್ ವಿರುದ್ಧ 2012ರಲ್ಲಿ ಮತ್ತು 2015ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 4 ಟೆಸ್ಟ್‌ಗಳ ಸರಣಿಯನ್ನಾಡಿತ್ತು.
ಭಾರತ ವಿದೇಶದಲ್ಲಿ 2014ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಿತ್ತು. ಇಂಗ್ಲೆಂಡ್ 3-2 ಅಂತರದಲ್ಲಿ ಸರಣಿ ಜಯಿಸಿತ್ತು. 2002ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ಐದು ಟೆಸ್ಟ್‌ಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-1 ಅಂತರದಲ್ಲಿ ಸರಣಿ ಜಯ ಗಳಿಸಿತ್ತು.
1987ರ ಮೊದಲು ಭಾರತ ಐದು ಟೆಸ್ಟ್‌ಗಳ 18 ಟೆಸ್ಟ್ ಸರಣಿಯನ್ನು ಆಯೋಜಿಸಿತ್ತು.1948ಮತ್ತು 49ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಸರಣಿ ನಡೆದಿತ್ತು.
ಕಳೆದ ಎರಡು ದಶಕಗಳಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ, ವೆಸ್ಟ್‌ಇಂಡೀಸ್, ಮತ್ತು ದಕ್ಷಿಣ ಆಫ್ರಿಕ ತಂಡಗಳು ಐದು ಟೆಸ್ಟ್‌ಗಳ ಸರಣಿಯಲ್ಲಿ ಹೆಚ್ಚು ಪಾಲ್ಗೊಂಡಿವೆ. ಇಂಗ್ಲೆಂಡ್ 8 ಬಾರಿ ಐದು ಟೆಸ್ಟ್‌ಗಳ ಸರಣಿಯಲ್ಲಿ ಹಣಾಹಣಿ ನಡೆಸಿದೆ.
,,,,,,





