ವಿಕಲಚೇತನ ಮಕ್ಕಳಿಗಾಗಿ ಏಕರೂಪ ಪಠ್ಯ ವ್ಯವಸ್ಥೆ: ಪಿಣರಾಯಿ ವಿಜಯನ್
ಪೆರಿಯಾದಲ್ಲಿ ಮಹಾತ್ಮ ಮಾದರಿ ಬಡ್ಸ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಕಾಸರಗೋಡು, ನ.4: ವಿಕಲಚೇತನ ಮಕ್ಕಳ ಶಿಕ್ಷಣಕ್ಕೆ ಏಕರೂಪದ ಪಠ್ಯ ಯೋಜನೆ ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಪುಲ್ಲೂರು ಪೆರಿಯಾದಲ್ಲಿಂದು ಮಹಾತ್ಮ ಮಾದರಿ ಬಡ್ಸ್ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎಂಡೋಸಲ್ಫಾನ್ ಸಂತ್ರಸ್ತ ವಲಯಗಳಲ್ಲಿ ವಿಶೇಷ ಯೋಜನೆಗಳನ್ನು ಸರಕಾರ ಹಮ್ಮಿಕೊಳ್ಳಲಿದೆ. ಸಂತ್ರಸ್ತರ ಪುನರ್ವಸತಿಗೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದು, ಈ ಬಾರಿಯ ಮುಂಗಡಪತ್ರದಲ್ಲಿ ಇದಕ್ಕಾಗಿ 10 ಕೋ.ರೂ. ಮೀಸಲಿರಿಸಿದೆ. ಸಂತ್ರಸ್ತರು ಬ್ಯಾಂಕ್‌ನಿಂದ ಪಡೆದ ಸಾಲ ಮರುಪಾವತಿಗೆ ಕಾಲಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದರು.
ಎಣ್ಮಕಜೆ, ಪರಪ್ಪ, ಪುಲ್ಲೂರು ಗ್ರಾಮಗಳಲ್ಲಿ ಎಂಸಂತ್ರಸ್ತರಿಗೆ 108 ಮನೆಗಳನ್ನು ನಿರ್ಮಿಸಲು 15 ಎಕರೆ ಕಂದಾಯ ಸ್ಥಳವನ್ನು ಸತ್ಯಸಾಯಿ ಟ್ರಸ್ಟ್‌ಗೆ ನೀಡಲು ಸರಕಾರ ಉದ್ದೇಶಿಸಿದೆ ಎಂದು ಹೇಳಿದರು.
ಎಂಡೋಸಲ್ಫಾನ್ ಸೆಲ್ ಈ ತಿಂಗಳೊಳಗೆ ಪೂರ್ಣ ಗೊಳ್ಳಲಿದೆ ಎಂದು ಅವರು ತಿಳಿಸಿದರು.
ಶಾಸಕ ಕೆ.ಕುಂಞಿರಾಮನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್, ಶಾಸಕ ಎಂ.ರಾಜಗೋಪಾಲ್, ಜಿಪಂ ಅಧ್ಯಕ್ಷ ಎ.ಜಿ.ಸಿ.ಬಶೀರ್, ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ. ಗೌರಿ, ಶಂಸುದ್ದೀನ್, ಡಾ.ಮುಹಮ್ಮದ್ ಶಕೀಲ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಸ್ವಾಗತಿಸಿದರು. ಗ್ರಾಪಂ ಅಧ್ಯಕ್ಷೆ ಶಾರದಾ ಎಸ್.ನಾಯರ್ ವಂದಿಸಿದರು.
ಸುಮಾರು 1.45 ಕೋ.ರೂ. ವೆಚ್ಚದಲ್ಲಿ ಎಂಡೋಸಂತ್ರಸ್ತ ಮಕ್ಕಳಿಗಾಗಿ ನಿರ್ಮಿತ ಮಹಾತ್ಮ ಮಾದರಿ ಬಡ್ಸ್ ಶಾಲೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಭಿನ್ನ ಸಾಮರ್ಥ್ಯದ ಮಕ್ಕಳ ಸಮಗ್ರ ಪುನರ್ವಸತಿ, ಮಕ್ಕಳ ಬುದ್ಧಿ ಸಾಮರ್ಥ್ಯ ಹೆಚ್ಚಿಸುವಿಕೆ, ಆರೋಗ್ಯ ಪಾಲನೆ ಸೇರಿದಂತೆ ವಿಶ್ವದರ್ಜೆಯ ಕಲಿಕಾ ವಾತಾವರಣವನ್ನು ಸೃಷ್ಟಿಸುವುದೇ ಈ ಮಾದರಿ ಶಾಲೆಯ ಉದ್ದೇಶಗಿದೆ.





