ಹಿಲರಿಯ ಸೋರಿಕೆಯಾದ ಇಮೇಲ್ ನಲ್ಲಿ ಅಮಿತಾಬ್ ಬಚ್ಚನ್ !

ನ್ಯೂಯಾರ್ಕ್, ನ.5 : ಡೆಮಾಕ್ರೆಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಸೋರಿಕೆಯಾದ ಇಮೇಲ್ ಗಳಲ್ಲೊಂದರಲ್ಲಿ ಆಕೆ ತಮ್ಮ ಸಮೀಪವರ್ತಿಯೊಬ್ಬರಲ್ಲಿ ಬಾಲಿವುಡ್ ಮೆಗಾ ಸ್ಟಾರ್ ಬಿಗ್ ಬಿ ಅಮಿತಾಭ್ ಬಚ್ಚನ್ ಬಗ್ಗೆ ವಿಚಾರಿಸಿದ್ದರೆಂದು ತಿಳಿದು ಬಂದಿದೆ.
ಕ್ಲಿಂಟನ್ ಅವರ ಸೋರಿಕೆಯಾದ ಇಮೇಲ್ ಅನ್ನು ದಿ ವಾಷಿಂಗ್ಟನ್ ಪೋಸ್ಟ್ ಇದರ ರಾಜಕೀಯ ವರದಿಗಾರ ಜೋಸ್ ಎ ಡೆಲ್ ರಿಯಲ್ ಪೋಸ್ಟ್ ಮಾಡಿದ್ದು, ಆಗ ಅಮೆರಿಕದ ಸೆಕ್ರಟರಿ ಆಫ್ ಸ್ಟೇಟ್ ಆಗಿದ್ದ ಕ್ಲಿಂಟನ್ ಅವರು ತಮ್ಮ ಪಾಕಿಸ್ತಾನಿ ಮೂಲದ ಸಹಾಯಕಿ ಹುಮಾ ಅಬೆಡಿನ್ ಬಳಿ ಬಚ್ಚನ್ ಬಗ್ಗೆ ಕೇಳಿದ್ದರು.
ಜುಲೈ 2011ರಂದು ಕಳುಹಿಸಲಾದ ಈ ಇಮೇಲ್ ನಲ್ಲಿ ‘‘ಕೆಲವು ವರ್ಷಗಳ ಹಿಂದೆ ನಾವು ಭೇಟಿಯಾದ ಖ್ಯಾತ ಹಿರಿಯ ಭಾರತೀಯ ನಟನಾರು?’’ ಎಂದು ಕ್ಲಿಂಟನ್ ಅಬೆಡಿನ್ ಅವರಲ್ಲಿ ಕೇಳಿದ್ದರು. ಈ ಪ್ರಶ್ನೆಗೆ ಉತ್ತರವಾಗಿ ಅಬೆಡಿನ್ ‘‘ಅಮಿತಾಭ್ ಬಚ್ಚನ್’’ ಎಂದು ಉತ್ತರಿಸಿದ್ದರು.
ಈಗ 74 ರ ಹರೆಯದ ಬಚ್ಚನ್ ಅವರನ್ನು ಕ್ಲಿಂಟನ್ ಏತಕ್ಕಾಗಿ ಕೇಳಿದರೆಂಬುದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಸೋರಿಕೆಯಾದ ಹಲವು ಇಮೇಲ್ ಗಳು ಹಿಲರಿ ಕ್ಲಿಂಟನ್ ಅವರಿಗೆ ಇದೀಗ ಚುನಾವಣಾ ಪ್ರಚಾರ ಕೊನೆಯ ಹಂತದಲ್ಲಿರುವಾಗ ತಲೆನೋವಿನ ವಿಚಾರವಾಗಿದ್ದು ಈಗಾಗಲೇ ಆಕೆಯ ಇಮೇಲ್ ಗಳ ಬಗ್ಗೆಮತ್ತೊಂದು ತನಿಖೆ ನಡೆಸುವಂತೆ ಎಫ್ ಬಿಐ ನಿರ್ದೇಶಕ ಜೇಮ್ಸ್ ಕೋಮಿ ಕಾಂಗ್ರೆಸ್ ಗೆ ಪತ್ರ ಬರೆದಿದ್ದಾರೆ.
ಅಬೆಡಿನ್ ಅವರಿಂದ ಪ್ರತ್ಯೇಕಗೊಂಡಿರುವ ಅವರ ಪತಿ, ಮಾಜಿ ಅಮೇರಿಕನ್ ಕಾಂಗ್ರೆಸಿಗ ಆಂಟನಿ ವೀನರ್ ಅವರ ಲ್ಯಾಪ್ ಟಾಪ್ ಒಂದರಲ್ಲಿ ಇದ್ದ ಸುಮಾರು 6.5 ಲಕ್ಷ ಇಮೇಲ್ ಗಳನ್ನು ಎಫ್ ಬಿ ಐ ಪರಿಶೀಲಿಸಲಾರಂಭಿಸಿದಂದಿನಿಂದ ಈ ಸುದ್ದಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆಯೆನ್ನಬಹುದು.
ಒಬಾಮ ಅವರ ಮೊದಲ ಅಧಿಕಾರಾವಧಿಯಲ್ಲಿ ಕ್ಲಿಂಟನ್ ಅವರು ಸೆಕ್ರಟರಿ ಆಫ್ ಸ್ಟೇಟ್ ಆಗಿದ್ದಾಗ ಉಪಯೋಗಿಸುತ್ತಿದ್ದ ಖಾಸಗಿ ಇಮೇಲ್ ಸರ್ವರ್ ಗೆ ಈ ಇಮೇಲ್ ಗಳು ಸಂಬಂಧ ಪಟ್ಟಿರಬಹುದೆಂದು ಶಂಕಿಸಲಾಗಿದೆ.





