ಉಪ್ಪಿನ ಸತ್ಯಾಗ್ರಹಕ್ಕೆ ಸಾಕ್ಷಿಯಾಗಿದ್ದ ಕಾನು ರಾಮದಾಸ್ ಗಾಂಧಿ ಆರೋಗ್ಯಸ್ಥಿತಿ ಗಂಭೀರ ..!

ಸೂರತ್, ನ.5: ರಾಷ್ಟ್ರಪಿತ ಮಹಾತ್ಮಾ ಗಾಂಧಿ ನೇತೃತ್ವದಲ್ಲಿ 1930ಮಾರ್ಚ್-ಎಪ್ರಿಲ್ ನಲ್ಲಿ ಗುಜರಾತ್ ನ ದಂಡಿ ಗ್ರಾಮದಲ್ಲಿ ಕೈಗೊಂಡಿದ್ದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದ ಬಗ್ಗೆ ನೀವು ಕೇಳಿರಬಹುದು. ಆ ಸಮಯದಲ್ಲಿ ತೆಗೆದ ಫೋಟೊವನ್ನು ನೋಡಿದರೆ ಓರ್ವ ಬಾಲಕ ಗಮನ ಸೆಳೆಯುತ್ತಾನೆ. ಆತ ಗಾಂಧೀಜಿ ಮೊಮ್ಮಗ. ಊರುಗೋಲನ್ನು ಹಿಡಿದುಕೊಂಡು ಗಾಂಧೀಜಿ ಅವರ ಸತ್ಯಾಗ್ರಹ ನಡಿಗೆಗೆ ಸಾಥ್ ನೀಡಿದ್ದ ಆ ಬಾಲಕ ಕಾನು ರಾಮದಾಸ್ ಗಾಂಧಿಗೆ ಈಗ 87ರ ಹರೆಯ.
ನಾಸಾದ ಮಾಜಿ ವಿಜ್ಞಾನಿ ರಾಮದಾಸ್ ಗಾಂಧಿ ಅವರನ್ನು ನೋಡಿಕೊಳ್ಳಲು ಯಾರು ಇಲ್ಲ. ವಯೋಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರಾಮದಾಸ್ ಗಾಂಧಿ ಚಾರಿಟೇಬಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.
ಅಹ್ಮದಾಬಾದ್ ಮೂಲದ ಧಿಮಂತ್ ಬಾಧಿಯಾ ಅವರು ಕಾನು ಗಾಂಧಿಯ ಹಳೆಯ ಸ್ನೇಹಿತ. ಅವರು ಇತ್ತೀಚೆಗೆ ರಾಮದಾಸ್ ಗಾಂಧಿ ಅವರಿಗೆ 21,000 ($315) ರೂಪಾಯಿ ಸಹಾಯ ಮಾಡಿದ್ದರು. ಅದು ಬಿಟ್ಟರೆ ರಾಮದಾಸ್ ಗಾಂಧಿಗೆ ಯಾರಿಂದಲೂ ನೆರವು ಸಿಕ್ಕಿಲ್ಲ.
ರಾಮದಾಸ್ ಗಾಂಧಿ ಪತ್ನಿ 90ರ ಹರೆಯದ ಶಿವಲಕ್ಷ್ಮೀ ಕಾನು ಗಾಂಧಿ ಅವರ ಆರೋಗ್ಯ ಚೆನ್ನಾಗಿಲ್ಲ. ಅವರು ಇವರಂತೆ ಶಿವ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಂಪತಿಗೆ ಮಕ್ಕಳು ಇಲ್ಲ.
ಸುಮಾರು ನಾಲ್ಕು ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿದ್ದ ಕಾನು ರಾಮದಾಸ್ ಗಾಂಧಿ ನಾಸಾದಲ್ಲಿ ವಿಜ್ಞಾನಿಯಾಗಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಇದೇ ವೇಳೆ ಅವರ ಪತ್ನಿ ಶಿವಲಕ್ಷ್ಮೀ ಕಾನು ಗಾಂಧಿ ಬೋಸ್ಟನ್ ಬಯೋಮೆಡಿಕಲ್ ರಿಸರ್ಚ್ ಕೇಂದ್ರದಲ್ಲಿ ಪ್ರೊಫೆಸರ‍್ ಮತ್ತು ಸಂಶೋಧಕಿಯಾಗಿ ಸೇವೆ ಸಲ್ಲಿಸಿದ್ದರು.
೨೦೧೪ರಲ್ಲಿ ಕಾನು ರಾಮದಾಸ್ ಗಾಂಧಿ ಮತ್ತು ಶಿವಲಕ್ಷ್ಮೀ ದಂಪತಿ ಭಾರತಕ್ಕೆ ಆಗಮಿಸಿದಾಗ ಅವರಿಗೆ ಇಲ್ಲಿ ಸ್ವಂತ ಜಾಗ,ಮನೆ ಇರಲಿಲ್ಲ. ಈ ಕಾರಣದಿಂದಾಗಿ ಅವರು ಸಮಸ್ಯೆ ಎದುರಿಸಿದರು. ವೃದ್ದಾಶ್ರಮಗಳಲ್ಲಿ ನೆಲೆಸಿದರು. ಹೊಸದಿಲ್ಲಿಯ ಗುರು ವಿಶ್ರಮ ವೃದ್ಧಾಶ್ರಮದಲ್ಲಿ ಆರು ತಿಂಗಳು ಇದ್ದರು. ಇದೇ ವೇಳೆ ಅವರನ್ನು ಕೇಂದ್ರ ಸಚಿವ ಮಹೇಶ್ ಶರ್ಮ ಭೇಟಿಯಾಗಿ ಅವರ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ತಿಳಿಸಿ ನೆರವು ದೊರಕಿಸಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಅವರಿಗೆ ಸರಕಾರದಿಂದ ಸಹಾಯಧನ ಸಿಕ್ಕಿಲ್ಲ ಎಂದು ಸ್ನೇಹಿತ ಬಾಧಿಯಾ ಹೇಳುತ್ತಾರೆ. ಪ್ರಧಾನಿ ಮೋದಿ ಅವರ ಕಚೇರಿಯ ಅಧಿಕಾರಿಗಳು, ಗುಜರಾತ್ ಸರಕಾರದ ಸಚಿವರುಗಳು ಈ ತನಕ ಕಾನು ರಾಮದಾಸ್ ಗಾಂಧಿ ಅವರನ್ನು ಕಣ್ಣೆತ್ತಿಯೂ ನೋಡಿಲ್ಲ.
ಕಳೆದ ಅಕ್ಟೋಬರ್ 22ರಂದು ಕಾನು ಗಾಂಧಿ ದಕ್ಷಿಣ ಗುಜರಾತ್‌ನ ಡೈಮಂಡ್ ಸಿಟಿ ಖ್ಯಾತಿಯ ಸೂರತ್ ತಲುಪಿದಾಗ ಅವರಿಗೆ ಹೃದಯಾಘಾತ ಉಂಟಾಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಶ್ರಮ ಸೇವಕ ರಾಕೇಶ್ ಅವರು ಕಾನು ಗಾಂಧಿ ನೆರವಿಗೆ ಇದ್ದಾರೆ. ಸ್ಥಳೀಯ ರಾಧಾಕೃಷ್ಣ ದೇವಸ್ಥಾನದ ಆಡಳಿತ ಸಮಿತಿ ಕಾನು ಗಾಂಧಿ-ಶಿವಲಕ್ಷ್ಮೀ ಗಾಂಧಿ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದೆ.
ಕಾನು ಅವರ ಸಹೋದರಿ ಮುಂಬೈನ ಉಷಾ ಗೋಕಾನಿ ದಿನನಿತ್ಯ ದೂರವಾಣಿ ಮೂಲಕ ಕಾನು ಗಾಂಧಿ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಕಾನು ಗಾಂಧಿ ಅವರ ಇನ್ನೊಬ್ಬಳು ಸಹೋದರಿ ಸುಮಿತ್ರಾ ಕುಲಕರ್ಣಿ ಅವರು ಮಾಜಿ ರಾಜ್ಯಸಭಾ ಸದಸ್ಯೆ. ಇತ್ತೀಚೆಗೆ ಕಾನು ಗಾಂಧಿ ದಂಪತಿಯನ್ನು ಭೇಟಿಯಾಗಿದ್ದರು.
ಕಾನು ಗಾಂಧಿ ಅವರ ಆಸ್ಪತ್ರೆಯ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ. ರಾಧಾಕೃಷ್ಣ ದೇವಸ್ಥಾನದ ಆಡಳಿತ ಸಮಿತಿಗೆ ಬಿಲ್ ಪಾವತಿಸಲು ಸಮಸ್ಯೆ ಎದುರಿಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಗಾಂಧೀಜಿ ಅವರ ಸಬರಮತಿ ಆಶ್ರಮ ಗಾಂಧಿ ಮೊಮ್ಮಗನ ಸ್ಥಿತಿಯ ಬಗ್ಗೆ ಕಣ್ಣೆತ್ತಿಯೋ ನೋಡದಿರುವುದು ದುರದೃಷ್ಟಕರ ಎನ್ನದೆ ವಿಧಿಯಿಲ್ಲ.






