ಹೆಲಿಕಾಪ್ಟರ್ ರಿಪೇರಿ ಮಾಡಿದ ಕಾರ್ ಮೆಕ್ಯಾನಿಕ್ ‘ಫೇಮಸ್’ ಆದರು. ಆದರೆ ಅದರ ಪೈಲಟ್ ಏನಾದರು ಗೊತ್ತೇ ?

ಹೊಸದಿಲ್ಲಿ, ನ.5: ಮುಂಬೈ ಮೂಲದ ಕಂಪೆನಿಯೊಂದರ ಒಡೆತನದ ಖಾಸಗಿ ಹೆಲಿಕಾಪ್ಟರ್ ಒಂದರ ಇಂಜಿನ್ ದೋಷ ಸರಿಪಡಿಸಲು ಇಬ್ಬರು ಕಾರ್ ಮೆಕ್ಯಾನಿಕ್ ಗಳಿಗೆ ಅನುಮತಿಸಿದ ಪೈಲಟ್ ಒಬ್ಬರು ಈಗ ಸಮಸ್ಯೆಗೆ ತುತ್ತಾಗಿದ್ದಾರೆ. ಹೆಲಿಕಾಪ್ಟರ್ ದುರಸ್ತಿಗೊಳಿಸಿದ ಕಾರ್ ಮೆಕ್ಯಾನಿಕ್ ಗಳು ಫೇಮಸ್ ಆದರೂ ಪೈಲಟ್ ನನ್ನು ವಿಮಾನಯಾನ ನಿರ್ದೇಶನಾಲಯವು ಕೆಲಸದಿಂದ ಕಿತ್ತು ಹಾಕಿದೆ.
ಅಕ್ಟೋಬರ್ 12, 2016ರಂದು ಕಂಪೆನಿಯ ಆಗಸ್ಟಾ ವೆಸ್ಟ್ ಲ್ಯಾಂಡ್ ಎಡಬ್ಲ್ಯೂ ಹೆಲಿಕಾಪ್ಟರ್ ಗೋವಾದಿಂದ ಪುಣೆಗೆ ಹೋಗುವ ದಾರಿಯಲ್ಲಿ ಕೊಲ್ಹಾಪುರದಲ್ಲಿಳಿದಾಗ ಇಂಜಿನಿನಲ್ಲಿ ಕಂಡುಬಂದ ಯಾವುದೋ ದೋಷ ಸರಿಪಡಿಸಲು ಕಾರ್ ಮೆಕ್ಯಾನಿಕ್ ಗಳನ್ನು ಕರೆಸಲಾಗಿತ್ತು ಎಂದು ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೊಲ್ಹಾಪುರದಲ್ಲಿ ಯಾವುದೇ ವಿಮಾನ ದುರಸ್ತಿಗೊಳಿಸುವ ಇಂಜಿನಿಯರುಗಳು ಲಭ್ಯರಿಲ್ಲದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಮೆಕ್ಯಾನಿಕ್ ಗಳು ಕೊಲ್ಹಾಪುರದಲ್ಲಿ ಸಣ್ಣ ಗ್ಯಾರೇಜೊಂದನ್ನು ಹೊಂದಿದ್ದರೆಂದು ತಿಳಿದು ಬಂದಿದೆ.
ಕಾರ್ ಮೆಕ್ಯಾನಿಕ್ ಗಳು ಹೆಲಿಕಾಪ್ಟರ್ ನ ಯಾವ ಭಾಗವನ್ನು ದುರಸ್ತಿಗೊಳಿಸುತ್ತಿದ್ದರೆಂದು ಪೈಲಟ್ ನನ್ನು ವಿಚಾರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಲಿಕಾಪ್ಟರ್ ಹೊಂದಿದ ಕಂಪೆನಿಯ ಮಾಲಕ ಅದರಲ್ಲಿ ಪ್ರಯಾಣಿಸುತ್ತಿದ್ದರೆಂಬ ಮಾಹಿತಿಯೂ ದೊರಕಿದೆ.
ಹೆಲಿಕಾಪ್ಟರ್ ಯಾವುದೇ ತೊಂದರೆಯಿಲ್ಲದೆ ಪುಣೆಯಲ್ಲಿ ಬಂದಿಳಿಯಿತಾದರೂ, ನಿಯಮಗಳ ಪ್ರಕಾರ ಸೂಕ್ತ ಅರ್ಹತೆಯುಳ್ಳ ತಂತ್ರಜ್ಞರೇ ಇಂತಹ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ.





