ಸುಫಿಯಾ ಮಅದನಿಗೆ ಬೆಂಗಳೂರಲ್ಲಿ ವಾಸ್ತವ್ಯಕ್ಕೆ ಅನುಮತಿ

ಕೊಚ್ಚಿ,ನ. 5; ಕಳಮಶ್ಶೇರಿ ಬಸ್‌ಗೆ ಬೆಂಕಿಯಿಟ್ಟ ಪ್ರಕರಣದ ಹತ್ತನೆ ಆರೋಪಿ ಪಿಡಿಪಿ ನಾಯಕ ಅಬ್ದುನ್ನಾಸರ್ ಮಅದನಿಯ ಪತ್ನಿ ಸುಫಿಯಾ ಮಅದನಿಗೆ ಜಾಮೀನು ವ್ಯವಸ್ಥೆಯಲ್ಲಿ ರಿಯಾಯಿತಿ ಅನುಮತಿಸಿ ಕೋರ್ಟು ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಇರುವ ಮಅದನಿಯವರನ್ನು ಉಪಚರಿಸಲು ಹೋಗಲಿಕ್ಕಾಗಿ ಎರ್ನಾಕುಲಂ ವಿಶೇಷ ಎನ್‌ಎಐ ಕೋರ್ಟು ಅನುಮತಿ ನೀಡಿದೆ.ಕೋರ್ಟಿನಿಂದ ಅನುಮತಿ ಇಲ್ಲದೆ ಎರ್ನಾಕುಲಂ ಜಿಲ್ಲೆಯಿಂದ ಹೊರಗೆ ಹೋಗಬಾರದು ಎಂದಿದ್ದ ಜಾಮೀನು ವ್ಯವಸ್ಥೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಸುಫಿಯಾ ಕೋರ್ಟಿಗೆ ಅರ್ಜಿಸಲ್ಲಿಸಿದ್ದರು.
ಈ ಹಿಂದೆ ಎರ್ನಾಕುಲಂ ಜಿಲ್ಲಾ ಕೋರ್ಟು ಈ ರೀತಿ ಜಾಮೀನು ನೀಡಿತ್ತು. ಎನ್‌ಐಎ ವಿರೋಧಿಸಿದ್ದರಿಂದ ಈ ವ್ಯವಸ್ಥೆಯನ್ನು ರದ್ದುಪಡಿಸಲು ಕೋರ್ಟು ಸಿದ್ಧವಾಗಲಿಲ್ಲ. ಬದಲಾಗಿ ಬೆಂಗಳೂರಿಗೆ ಹೋಗಲು ಖಾಯಂ ಅನುಮತಿ ನೀಡಿದೆ. ಹೋಗುವುದಕ್ಕೆ ಮೊದಲು ಕೋರ್ಟಿನಲ್ಲಿ ಅಫಿದಾವಿತ್ ನೀಡಬೇಕು. ಮಾತ್ರವಲ್ಲ. ಬೆಂಗಳೂರಿನ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ವಾರಕ್ಕೊಮ್ಮೆ ಹಾಜರಾಗಬೇಕು ಎಂದು ಕೋರ್ಟು ಆದೇಶ ನೀಡಿದೆ ಎಂದು ವರದಿಯಾಗಿದೆ.





