ಎತ್ತರ ಹೆಚ್ಚಿಸಿಕೊಳ್ಳಲು ಶಸ್ತ್ರ ಚಿಕಿತ್ಸೆಗೊಳಗಾದ ಯುವಕ: 7 ತಿಂಗಳ ಬಳಿಕ ಪರಿಸ್ಥಿತಿ ಏನಾಗಿದೆ ನೋಡಿ

ಹೈದರಾಬಾದ್, ನ.5: ನಗರದ 22 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಎತ್ತರ ಹೆಚ್ಚಿಸಿಕೊಳ್ಳುವ ಶಸ್ತ್ರಕ್ರಿಯೆ ಮಾಡಿಸಿಕೊಂಡು ನಂತರ ಇನ್ನಷ್ಟು ಆರೋಗ್ಯ ಸಮಸ್ಯೆಗೆ ತುತ್ತಾದ ಘಟನೆಯ ನಂತರ ತೆಲಂಗಾಣ ರಾಜ್ಯ ಮೆಡಿಕಲ್ ಕೌನ್ಸಿಲ್, ಸರ್ಜನ್ ಡಾ.ಜಿ.ಚಂದ್ರಭೂಷಣ್ ಅವರನ್ನು ತಪ್ಪಿತಸ್ಥರು ಎಂದು ಘೋಷಿಸಿ ಅವರ ಮೇಲೆ ಎರಡು ವರ್ಷಗಳ ನಿರ್ಬಂಧ ವಿಧಿಸಿದೆ.
ಈ ವರ್ಷದ ಎಪ್ರಿಲ್ 5ರಂದು 5.7 ಅಡಿ ಎತ್ತರದ ನಿಖಿಲ್ ರೆಡ್ಡಿ ಎಂಬ ಟೆಕ್ಕಿ ಎರಡು ಇಂಚು ಹೆಚ್ಚು ಉದ್ದವಾಗಬೇಕೆಂಬ ಉದ್ದೇಶದಿಂದ ಎತ್ತರ ಹೆಚ್ಚಿಸಿಕೊಳ್ಳುವ ಶಸ್ತ್ರಕ್ರಿಯೆ ನಡೆಸುವ ಸಲುವಾಗಿ ರೂ.4 ಲಕ್ಷ ತನಕ ವೆಚ್ಚ ಮಾಡಿದ್ದರು. ಆದರೆ ಶಸ್ತ್ರಕ್ರಿಯೆಯ ನಂತರ ಬಹಳಷ್ಟು ತೊಂದರೆ ಅನುಭವಿಸಬೇಕಾಗಿ ಬಂದಿತ್ತು. ಆದರೆ ಶಸ್ತ್ರಕ್ರಿಯೆ ನಡೆಸಲ್ಪಟ್ಟ ಗ್ಲೋಬಲ್ ಆಸ್ಪತ್ರೆಯ ಪ್ರಕಾರ ಶಸ್ತ್ರಕ್ರಿಯೆಯಲ್ಲಿ ಯಾವುದೇ ದೋಷವಾಗಿಲ್ಲ.
ಶಸ್ತ್ರಕ್ರಿಯೆಗೊಳಗಾದ ಯುವಕನಿಗೆ ಶಸ್ತ್ರಕ್ರಿಯೆಯ ಮೊದಲು ಎಲ್ಲಾ ವಿವರಗಳನ್ನೂ ಸ್ಪಷ್ಟವಾಗಿ ತಿಳಿಸಲಾಗಿತ್ತು ಹಾಗೂ ಆತನ ಒಪ್ಪಿಗೆಯ ನಂತರವೇ ಚಿಕಿತ್ಸೆ ನಡೆಸಲಾಗಿತ್ತೆಂದು ಆಸ್ಪತ್ರೆಯ ಹಿರಿಯ ಅಧಿಕಾರಿ ಡಾ ಶಿಬಾಜಿ ಛಟ್ಟೋಪಾಧ್ಯಾಯ ಹೇಳಿದ್ದಾರೆ.
ಶಸ್ತ್ರಕ್ರಿಯೆಯ ನಂತರ ಹಾಸಿಗೆಪಾಲಾಗಿದ್ದ ನಿಖಿಲ್ ಒಂದು ಹಂತದಲ್ಲಿ ಚಿಕಿತ್ಸೆ ನಿಲ್ಲಿಸುವ ಇಚ್ಛೆಯನ್ನೂ ಹೊಂದಿದ್ದರು. ಆದರೆ ಶಸ್ತ್ರಕ್ರಿಯೆಯ ವಿಚಾರ ಬಹಿರಂಗಗೊಂಡಾಗ ತೆಲಂಗಾಣ ರಾಜ್ಯ ಮೆಡಿಕಲ್ ಕೌನ್ಸಿಲ್ ಸ್ವಯಂ ಪ್ರೇರಣೆಯಿಂದ ಪ್ರಕರಣ ಕೈಗೆತ್ತಿಕೊಂಡು ವೈದ್ಯರ ಮೇಲೆ ನಿರ್ಬಂಧ ಹೇರಿದೆ.
ನಿಖಿಲ್ ತಂದೆ ಎಸ್ ಗೋವರ್ಧನ್ ರೆಡ್ಡಿಯವರ ಪ್ರಕಾರ ಹತ್ತು ದಿನಗಳ ಹಿಂದೆಯಷ್ಟೇ ನಿಖಿಲ್ ಮೆಟ್ಟಲು ಇಳಿದ ಪರಿಣಾಮ ಆತನ ಗಾಯಗಳಲ್ಲಿ ಮತ್ತೊಮ್ಮೆ ಸೋಂಕು ಉಂಟಾಗಿದ್ದು, ಈಗ ಆತ ಮತ್ತೆ ಹಾಸಿಗೆ ಹಿಡಿದಿದ್ದಾನೆ.
ನಿಖಿಲ್ ಸಂಪೂರ್ಣ ಗುಣಮುಖನಾಗುವ ತನಕ ಆತನಿಗೆ ಚಿಕಿತ್ಸೆ ನೀಡುವಂತೆ ಗ್ಲೋಬಲ್ ಹಾಸ್ಪಿಟಲ್ ಗೆ ಮೆಡಿಕಲ್ ಕೌನ್ಸಿಲ್ ನಿರ್ದೇಶನ ನೀಡಿದೆ.





