ಚಿಕಿತ್ಸೆಗೆ ಹಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡ ಎಂಡೋ ಸಂತ್ರಸ್ತೆ
ಈ ಸಾವು ನ್ಯಾಯವೇ?

ಕಾಸರಗೋಡು, ನ.5: ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಎಂಡೋಸಲ್ಫಾನ್ ಸಂತ್ರಸ್ತ ಮಹಿಳೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಆದೂರು ನಾಟೆಕಲ್ ಬೆಳ್ಳೂರಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಬೆಳ್ಳೂರಿನ ರಾಜೀವಿ (60) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಕೃತ್ಯ ಬೆಳಕಿಗೆ ಬಂದಿದೆ. ಕೂಲಿ ಕೆಲಸಕ್ಕೆ ತೆರಳಿದ್ದ ಮಕ್ಕಳು ಮನೆಗೆ ಬಂದಾಗ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದ ರಾಜೀವಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಇದಲ್ಲದೇ ರಾಜೀವಿಗೆ ತುರ್ತು ಶಸ್ತ್ರಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದರು. ಇದಕ್ಕೆ 60 ಸಾವಿರ ರೂ. ವೆಚ್ಚವಾಗಲಿದೆ ಎಂದು ಹೇಳಿದ್ದರೆನ್ನಲಾಗಿದೆ. ಹಣ ಇಲ್ಲದೆ ರಾಜೀವಿ ಇದರಿಂದ ಮನನೊಂದಿದ್ದರು. ಇದೇ ಬೇಸರದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಸಂಬಂಧಿಕರು ದೂರಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದರೂ ರಾಜೀವಿಗೆ ಸರಕಾರದ ಸಹಾಯಧನ ಲಭಿಸಿರಲಿಲ್ಲ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ರಾಜೀವಿಯವರ ಚಿಕಿತ್ಸೆಗೆ 60 ಸಾವಿರ ರೂ. ಬೇಕಾಗಿತ್ತು. ಇದು ಮಾತ್ರವಲ್ಲ ವಾರವೊಂದಕ್ಕೆ ಚಿಕಿತ್ಸೆಗೆ 2ರಿಂದ 2.5 ಸಾವಿರ ರೂ. ವೆಚ್ಚವಾಗುತ್ತಿದೆ. ರಾಜೀವಿಯವರ ಪತಿ ವಿಶ್ವನಾಥ ಕೆಲ ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಕೂಲಿ ಕೆಲಸ ಮಾಡುವ ಜೀವನ ಸಾಗಿಸುವ ಈ ಕುಟುಂಬಕ್ಕೆ ಇಷ್ಟೊಂದು ಹಣ ಹೊಂದಿಸುವುದು ಕಷ್ಟಕರವಾಗಿತ್ತು. ಇದರಿಂದ ಜಾನಕಿ ಹತಾಶರಾಗಿದ್ದರು ಎಂದು ಹೇಳಲಾಗಿದೆ. ತಿಂಗಳಿಗೆ 1200 ರೂ. ಮಾಶಾಸನ ಬಿಟ್ಟರೆ ಉಳಿದಂತೆ ಸರಕಾರದ ಯಾವುದೇ ಸೌಲಭ್ಯವೂ ಇವರಿಗೆ ಲಭಿಸುತ್ತಿರಲಿಲ್ಲ ಈ ನಿಟ್ಟಿನಲ್ಲಿ ಹಲವು ಬಾರಿ ಅರ್ಜಿ ಸಲ್ಲಿಸಿ ಕಚೇರಿಗಳನ್ನು ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ ಮೃತದೇಹವನ್ನು ಶನಿವಾರ ಬೆಳಿಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.





