ಎಸ್‌ಪಿಯ ಬೆಳ್ಳಿಹಬ್ಬದಲ್ಲೂ ಅಖಿಲೇಶ-ಶಿವಪಾಲ್ ವಾಕ್ಸಮರ

ಲಕ್ನೋ,ನ.5: ಗುರುವಾರವಷ್ಟೇ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದ ಸಮಾಜವಾದಿ ಪಕ್ಷದಲ್ಲಿಯ ಕಚ್ಚಾಟಕ್ಕೆ ಬಹುಶಃ ಕೊನೆಯೇ ಇಲ್ಲವೇನೋ? ಇಂದು ಇಲ್ಲಿ ನಡೆದ ಪಕ್ಷದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿಯೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ ಯಾದವ ಮತ್ತು ಅವರ ಚಿಕ್ಕಪ್ಪ, ಎಸ್‌ಪಿ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ ಅವರ ನಡುವೆ ವಾಕ್ಸಮರ ಮುಂದುವರಿದಿದ್ದು, ಅವರೊಳಗಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬಹಿರಂಗಗೊಂಡಿದೆ.
ಕೆಲವರು ಅದೃಷ್ಟದಿಂದ ಅಧಿಕಾರ ಪಡೆಯುತ್ತಾರೆ,ಕೆಲವರು ಪರಿಶ್ರಮದಿಂದ ಮತ್ತು ಕೆಲವರು ಪಿತ್ರಾರ್ಜಿತವಾಗಿ ಅಧಿಕಾರಕ್ಕೆ ಹಕ್ಕುದಾರರಾಗುತ್ತಾರೆ. ಆದರೆ ಕೆಲವರು ತಮ್ಮ ಬದುಕಿನುದ್ದಕ್ಕೂ ಪರಿಶ್ರಮ ಪಡುತ್ತಲೇ ಇರುತ್ತಾರೆ, ಆದರೆ ಅವರಿಗೆ ಏನೂ ದೊರೆಯುವುದಿಲ್ಲ ಎಂದು ತನ್ನ ಭಾಷಣದಲ್ಲಿ ಹೇಳಿದ ಶಿವಪಾಲ್, ಅಖಿಲೇಶ ಅವರು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ ಅವರ ಪುತ್ರರಾಗಿದ್ದರಿಂದಲೇ ಮುಖ್ಯಮಂತ್ರಿಯ ಗದ್ದುಗೆಯನ್ನೇರಿದ್ದಾರ ಎಂದು ಪರೋಕ್ಷವಾಗಿ ಸೂಚಿಸುವ ಮೂಲಕ ಮೊದಲ ಬಾಣವನ್ನು ಬಿಟ್ಟರು.
ತಾನು ಒಳ್ಳೆಯ ಕೆಲಸ ಮಾಡಿದ್ದೇನೆ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಅಖಿಲೇಶ ಜೊತೆ ಸಹಕರಿಸಿದ್ದೇನೆ ಎಂದು ನುಡಿದ ಅವರು, ಅಖಿಲೇಶ ತನ್ನಿಂದ ಯಾವ ತ್ಯಾಗ ಬಯಸುತ್ತಾರೋ ಅದಕ್ಕೆ ತಾನು ಸಿದ್ಧನಿದ್ದೇನೆ. ತನಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ. ಅಖಿಲೇಶ ತನ್ನನ್ನು ಅವಮಾನಿಸಲಿ, ಸಚಿವ ಸ್ಥಾನದಿಂದ ಎಷ್ಟು ಸಲ ಬೇಕಾದರೂ ವಜಾ ಮಾಡಲಿ...ಆದರೆ ತಾನು ಪಕ್ಷಕ್ಕಾಗಿ ತನ್ನ ರಕ್ತವನ್ನು ನೀಡಲೂ ಸಿದ್ಧನಿದ್ದೇನೆ ಎಂದು ಭಾವಪೂರ್ಣವಾಗಿ ಹೇಳಿದರು.
ತನ್ನ ಭಾಷಣದ ಸರದಿ ಬಂದಾಗ ಶಿವಪಾಲ್‌ಗೆ ತಿರುಗೇಟು ನೀಡಲು ಕಾಯುತ್ತಿದ್ದ ಅಖಿಲೇಶ ಅಲ್ಲಿ ಉಪಸ್ಥಿತರಿದ್ದ ಸಚಿವ ಗಾಯತ್ರಿಪ್ರಸಾದ್ ಪ್ರಜಾಪತಿಯತ್ತ ಬೆಟ್ಟು ಮಾಡಿ, ನೀವು ನನಗೆ ಖಡ್ಗವನ್ನು ಕೊಟ್ಟಿದ್ದೀರಿ ಮತ್ತು ಅದನ್ನು ನಾನು ಬಳಸಬೇಕೆಂದು ನೀವು ಬಯಸುವುದಿಲ್ಲ ಎಂದರು. ಅವರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಸಚಿವರ ವಜಾಕ್ಕೆ ಶಿವಪಾಲ್ ಪಾಳಯದಿಂದ ಎದುರಾಗಿದ್ದ ವಿರೋಧವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ಭ್ರಷ್ಟಾಚಾರದ ಆರೋಪದಲ್ಲಿ ಪ್ರಜಾಪತಿಯವರನ್ನು ಅಖಿಲೇಶ ಹುದ್ದೆಯಿಂದ ವಜಾಗೊಳಿಸಿದ್ದರಾದರೂ ಬಳಿಕ ಮುಲಾಯಂ ಸೂಚನೆಯ ಮೇರೆಗೆ ಮರಳಿ ಸಂಪುಟಕ್ಕೆ ಸೇರಿಸಿಕೊಂಡಿದ್ದರು.







